ಅಂಕೋಲಾ: ಪ್ರಸಕ್ತ ವರ್ಷ ಬಿಡುವಿಲ್ಲದೇ ಸುರಿದ ಅತಿಯಾದ ಮಳೆಯಿಂದಾಗಿ ಸುಂಕಸಾಳ, ರಾಮನಗುಳಿ, ಕೊಡ್ಲಗದ್ದೆ, ಕಲ್ಲೇಶ್ವರ, ಹಳವಳ್ಳಿ, ಕನಕನಹಳ್ಳಿ, ಹೆಗ್ಗಾರ, ಶೇವ್ಕಾರ ಹಾಗೂ ಬಹುತೇಕ ಭಾಗದ ಗ್ರಾಮದ ರೈತರ ತೋಟಗಳಲ್ಲಿ ವಿಪರೀತ ಕೊಳೆರೋಗ ಕಾಣಿಸಿಕೊಂಡಿದ್ದು ರೈತರು ಕಂಗಾಲಾಗಿದ್ದಾರೆ.
ಮೇ ತಿಂಗಳಲ್ಲಿ ಬಯೋಫೈಟ್ ದ್ರಾವಣ ಸಿಂಪಡಿಸಿ ಜುಲೈ ನಲ್ಲಿ ಮೈಲುತುತ್ತ ಸುಣ್ಣದ ಮಿಶ್ರಣ ದ್ರಾವಣ ಸಿಂಪಡಿಸಿದರೂ ಕೂಡ ಕೊಳೆ ರೋಗ ನಿಯಂತ್ರಣಕ್ಕೆ ಬರದೇ ಬಹುತೇಕ ರೈತರ ತೋಟಗಳಲ್ಲಿ 50% ಕ್ಕೂ ಹೆಚ್ಚು ಅಡಿಕೆಗಳು ಉದುರಿ ರೈತರಿಗೆ ಭಾರಿ ನಷ್ಟ ಉಂಟಾಗಿದೆ.
ತೋಟದಲ್ಲಿ ಪ್ರತಿನಿತ್ಯ ಕೊಳೆ ಅಡಿಕೆ ಹೆಕ್ಕಿ ರೈತರು ಹೈರಾಣಾಗಿದ್ದಾರೆ. ಕೊಳೆ ಅಡಿಕೆಗಳಲ್ಲಿ ಬಹಳಷ್ಟು ಅಡಿಕೆಗಳು ತುಂಬಾ ಚಿಕ್ಕದಿದ್ದು ಹೆಕ್ಕಿದರೂ ಯಾವುದೇ ಪ್ರಯೋಜನವಿಲ್ಲ. ಉಳಿದವುಗಳನ್ನು ಹೆಕ್ಕಿದರೂ ಅದಕ್ಕೆ ಅತ್ಯಲ್ಪ ದರ ದೊರೆತು ಹೆಕ್ಕಿದ ಹಣ ಕೂಡ ದೊರೆಯುವುದಿಲ್ಲ ಎಂಬಂತಾಗಿದೆ ರೈತರ ಸ್ಥಿತಿ. ಅಡಿಕೆಗಳು ಉದುರಿ ತೋಟದ ತುಂಬೆಲ್ಲ ಬೀಳುತ್ತಿವೆ. ಈ ರೀತಿ ಆದರೆ ಅಡಿಕೆ ಬೆಳೆಯನ್ನೇ ನಂಬಿರುವ ರೈತರು ಜೀವನ ನಡೆಸುವುದು ಕಷ್ಟಕರ ಸ್ಥಿತಿ ಎಂಬಂತಾಗಿದೆ.
ಈಗಾಗಲೇ ನಮ್ಮ ತೋಟದಲ್ಲಿರುವ ಅರ್ಧಕ್ಕಿಂತ ಹೆಚ್ಚು ಅಡಿಕೆಗಳು ಉದುರಿ ಯಾವ ಪ್ರಯೋಜನಕ್ಕೂ ಅವು ಬಾರದೇ ತುಂಬಾ ನಷ್ಟವಾಗಿದೆ ಸಕಾಲಕ್ಕೆ ಕೊಳೆ ನಿಯಂತ್ರಣಕ್ಕೆ ಔಷಧ ಸಿಂಪಡಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಕೃಷಿಕರಾದ ರಾಘವೇಂದ್ರ ಹೆಗಡೆ ಹೇಳುತ್ತಾರೆ.
ಸಮಯಕ್ಕೆ ಸರಿಯಾಗಿ ಔಷಧಿ ಸಿಂಪಡಿಸಿದರೂ ಕೊಳೆರೋಗಕ್ಕೆ ಅಡಿಕೆಗಳು ಉದುರಿ ಬೀಳುತ್ತಿವೆ. ನಿರಂತರ ಸುರಿಯುತ್ತಿರುವ ಮಳೆ ಗಾಳಿಗೆ ಮರಗಳಿಂದ ಕ್ವಿಂಟಲ್ ಗಟ್ಟಲೇ ಅಡಿಕೆಗಳು ಉದುರಿ ಬೀಳುತ್ತಿದ್ದು ಬಿದ್ದ ಅಡಿಕೆ ಯಾವುದಕ್ಕೂ ಪ್ರಯೋಜನಕ್ಕೆ ಬಾರದಂತಾಗಿದೆ. –ಸುಕ್ರು ಗೌಡ ರಾಮನಗುಳಿ, ಕೃಷಿಕ
ಡೊಂಗ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹರಡಿರುವ ಕೊಳೆ ರೋಗದ ಕುರಿತು ಅಂಕೋಲಾ ತೋಟಗಾರಿಕಾ ಇಲಾಖೆಯು ಸೂಕ್ತ ಕ್ರಮವನ್ನು ತೆಗೆದುಕೊಂಡು ರೈತರಿಗೆ ಪರಿಹಾರ ಒದಗಿಸುವ ಕಾರ್ಯವನ್ನು ನಿರ್ವಹಿಸಬೇಕಿದೆ.ಈ ವಿಚಾರದ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆದು ರೈತರಿಗೆ ನ್ಯಾಯ ಒದಗಿಸಬೇಕಿದೆ. 30% ಕ್ಕಿಂತ ಹೆಚ್ಚು ಬೆಳೆ ನಾಶವಾದಲ್ಲಿ ಸೂಕ್ತ ಪರಿಹಾರ ನೀಡಬೇಕೆಂದು ನಿಯಮಾವಳಿ ಕೂಡ ಇದ್ದು ಈಗಾಗಲೇ 50% ಕ್ಕಿಂತ ಹೆಚ್ಚಿನ ಬೆಳೆ ನಾಶವಾಗಿದೆ. ಆದ್ದರಿಂದ ಈ ಭಾಗದ ಜನತೆಗೆ ನ್ಯಾಯ ಒದಗಿಸಲು ಸ್ಥಳೀಯ ಸರ್ಕಾರವಾದ ಗ್ರಾಮ ಪಂಚಾಯತಿ ಹಾಗೂ ತೋಟಗಾರಿಕಾ ಇಲಾಖೆಗಳು ಶ್ರಮಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಿದಲ್ಲಿ ರೈತರಿಗೆ ಅಲ್ಪವಾದರೂ ಸಾಂತ್ವನ ದೊರಕಬಹುದಾಗಿದೆ.