ಸಿದ್ದಾಪುರ: ಭುವನಗಿರಿ,ಕಲ್ಲಾರೆಮನೆಯ ಸುಷಿರ ಸಂಗೀತ ಪರಿವಾರದ ಸಂಯೋಜನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಭುವನಗಿರಿಯ ಶ್ರೀ ಭುವನೇಶ್ವರಿ ದೇವಾಲಯದಲ್ಲಿ ಗುರುಪೂರ್ಣೀಮಾ ಮತ್ತು ಸಂಗೀತ ಬೈಠಕ್ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶ್ರೀ ಭುವನೇಶ್ವರಿ ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡ ಮಾತನಾಡಿ ಈ ಪ್ರದೇಶದಲ್ಲಿ ಸಂಗೀತದ ಕುರಿತು ಆಸಕ್ತಿಯ ವಾತಾವರಣ ರೂಪಿಸಿದ್ದು ಸುಷಿರ ಸಂಗೀತ ಪರಿವಾರ. ಈ ದೇವಾಲಯದಲ್ಲೂ ಹಲವು ಪ್ರಸಿದ್ಧ ಗಾಯಕರ,ಕಲಾವಿದರ ಕಾರ್ಯಕ್ರಮ ಆಯೋಜಿಸುವದರ ಜೊತೆಗೆ ಸ್ಥಳೀಯ ಪ್ರತಿಭೆಗಳ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಅದು ಮುಂದುವರೆಯಲಿ ನಿಶುಲ್ಕದಿಂದ ಈ ಭಾಗದ ಆಸಕ್ತರಿಗೆ ಸಂಗೀತ ಕಲಿಸುತ್ತಿರುವ ಜಯರಾಮ ಭಟ್ಟ ಹೆಗ್ಗಾರಳ್ಳಿ ಅಪರೂಪದ ವ್ಯಕ್ತಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪತ್ರಕರ್ತ,ಸಾಹಿತಿ ಗಂಗಾಧರ ಕೊಳಗಿ ಮಾತನಾಡಿ ಬುದ್ದಿ ಮತ್ತು ಭಾವ ಎರಡರ ಸಮನ್ವಯ ಸಂಗೀತದಲ್ಲಿದೆ. ಸಂಗೀತದಲ್ಲಿ ಪರಿಣಿತಿ ಪಡೆಯಲು ಬುದ್ದಿ ಬೇಕು. ಅದನ್ನು ಆಸ್ವಾದಿಸಲು ಭಾವ ಸಾಕು. ಗುರುವಿನ ಕುರಿತಾದ ಪೂಜ್ಯಭಾವ, ಭಕ್ತಿ, ಶರಣಾಗತಿಯಂಥ ಆಧ್ಯಾತ್ಮಿಕ ಮೌಲ್ಯಗಳನ್ನು ಸಂಗೀತ ನಮ್ಮಲ್ಲಿ ರೂಪಿಸುತ್ತದೆ. ಸಂಗೀತ ಕಲಿಕೆ ಉಳಿದೆಲ್ಲ ಕಲೆಗಳಿಗಿಂತ ಭಿನ್ನ. ಇಲ್ಲಿ ಗುರು-ಶಿಷ್ಯರ ಸಂಬಂಧ ಅನನ್ನಯವಾದದ್ದು. ಈ ಸಂದರ್ಭದಲ್ಲಿ ಇಲ್ಲಿನ ಸ್ವರ ಗಂಗಾ ತಂಡದ ಆಸಕ್ತರಿಗೆ ಯಾವುದೇ ಶುಲ್ಕ ಪಡೆಯದೇ ಸಂಗೀತ ಪಾಠ ಮಾಡುತ್ತಿರುವ ಹಿರಿಯ ಸಂಗೀತಗಾರ ಜಯರಾಮ ಭಟ್ ಹೆಗ್ಗಾರಳ್ಳಿಯವರಿಗೆ ಗುರುವಂದನೆ ಸಲ್ಲಿಸುತ್ತಿರುವದು ನಮ್ಮ ಪರಂಪರೆಗೆ ಸಲ್ಲುವ ಗೌರವ ಎಂದರು.
ಅಭ್ಯಾಗತರಾಗಿ ಪಾಲ್ಗೊಂಡ ರಂಗನಿರ್ದೇಶಕ ಗಣಪತಿ ಹೆಗಡೆ ಹುಲಿಮನೆ ಮಾತನಾಡಿ ಎಲ್ಲ ಕಲಾ ಪ್ರಕಾರಗಳಿಗೂ ಅಗತ್ಯವಾಗಿರುವ ಸಂಗೀತ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುವಂಥದ್ದು. ಸಂಗೀತಗಾರರ ಕುಟುಂಬದ ಜಯರಾಮ ಭಟ್ಟರಿಗೆ ಗೌರವ ಸಲ್ಲಿಸುತ್ತಿರುವದು ನಿಜಕ್ಕೂ ಸಲ್ಲಬೇಕಾದ ಗೌರವ. ಎಲ್ಲ ಕಲಾ ಚಟುವಟಿಕೆಗಳಿಗೆ ದಾನಿಗಳ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಭುವನಗಿರಿಯ ಸ್ವರಗಂಗಾ ತಂಡದ ಸದಸ್ಯೆಯರು ತಮ್ಮ ಗುರುಗಳಾದ ಜಯರಾಮ ಭಟ್ಟರಿಗೆ ಗುರುವಂದನೆ ಸಲ್ಲಿಸಿದರು.
ರಾಜೇಶ್ವರಿ ಭಟ್ ಹಾಗೂ ಶ್ರೀನಿಧಿ ಭಟ್ ಅನಿಸಿಕೆ ವ್ಯಕ್ತಪಡಿಸಿದರು.
ಸ್ವರಗಂಗಾ ತಂಡದವರಿಂದ ಭಕ್ತಿ ಸಂಗೀತ ಹಾಗೂ ಅಜಯ ಹೆಗಡೆ ವರ್ಗಾಸರ (ಹಾರ್ಮೋನಿಯಂ) ಮತ್ತು ನಿತಿನ್ ಹೆಗಡೆ ಕಲಗದ್ದೆ(ತಬಲಾ) ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಸುಷಿರ ಸಂಗೀತ ಪರಿವಾರದ ಸಂಚಾಲಕ ನಾರಾಯಣ ಹೆಗಡೆ ಕಲ್ಲಾರೆಮನೆ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿ ಸಂಸ್ಥೆಯ ಚಟುವಟಿಕೆಗಳ ಕುರಿತು ವಿವರಿಸಿದರು.ಪ್ರೊ|ಪ್ರಶಾಂತ ಹೆಗಡೆ ಭುವನಗಿರಿ ನಿರೂಪಿಸಿದರು.