Slide
Slide
Slide
previous arrow
next arrow

ರೋಟರಿಯಿಂದ ಕಿವುಡು ಮಕ್ಕಳ ಶಾಲೆಯಲ್ಲಿ ಕದಂಬ ಇಂಟರ್ಯಾಕ್ಟ್ ಕ್ಲಬ್ ಪ್ರಾರಂಭ

300x250 AD

ಶಿರಸಿ: ರೋಟರಿ ಕ್ಲಬ್ ಶಿರಸಿ ಇವರ ವತಿಯಿಂದ ದಿ.ಮಹಾದೇವ ಭಟ್ ಕೂರ್ಸೆ ಕಿವುಡು ಮಕ್ಕಳ ವಸತಿ ಶಾಲೆ ಶಿರಸಿ ಇದರಲ್ಲಿ 2024-25ನೇ ಸಾಲಿನ ಕದಂಬ ಇಂಟರ್ಯಾಕ್ಟ್ ಕ್ಲಬ್ ಪದಾಧಿಕಾರಿಗಳ ಸೇವಾ ದೀಕ್ಷಾ ಸಮಾರಂಭವನ್ನು ಆ.1, ಗುರುವಾರದಂದು ನಡೆಸಲಾಯಿತು.

ಶಾಲೆಯ ಹಳೆಯ ವಿದ್ಯಾರ್ಥಿನಿ ಕುಮಾರಿ ಸುಚಿತ್ರಾ ಅವಳ ಪ್ರಾರ್ಥನಾ ಶ್ಲೋಕ ಹಾಗೂ ಶಾಲಾ ಶಿಕ್ಷಕಿಯರ ಭಕ್ತಿಗೀತೆಯ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಅತಿಥಿಗಳಿಗೆ ಸ್ವಾಗತ ಕೋರಿದ ರೋಟರಿ ಕ್ಲಬ್ ಶಿರಸಿ ಇದರ ಅಧ್ಯಕ್ಷೆ ಡಾ. ಸುಮನ ಹೆಗಡೆ ಅವರು “ಸೇವಾ ಸಂಸ್ಥೆ ಆಗಿರುವ ರೋಟರಿಯ ಮಕ್ಕಳ ಘಟಕ ಇಂಟರ‌್ಯಾಕ್ಟ್ ಕ್ಲಬ್. ಮಕ್ಕಳಲ್ಲಿ ನಾಯಕತ್ವ ಸಾಮರ್ಥ್ಯ ವರ್ಧನೆ ಮಾಡುವುದು ಇದರ ಮುಖ್ಯ ಧ್ಯೇಯ. ಇದು ಏರ್ಪಡಿಸುವ ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸಬಹುದು. ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು. ಪ್ಲಾಸ್ಟಿಕ್ ಮುಕ್ತ ಶಾಲಾ ಆವಾರ ಮಾಡಬಹುದು. ಮೊಬೈಲ್ ಬದಲು ಕ್ರೀಡೆಗಳಲ್ಲಿ ಪಾಲ್ಗೊಳ್ಳಬಹುದು. ಮಕ್ಕಳಿಗೆ ಕ್ರೀಡೆ ಹಾಗೂ ಇನ್ನಿತರ ಸ್ಪರ್ಧೆಗಳಲ್ಲಿ ದೊರಕುವ ಸಂತೋಷ ಸಂಘಟಕರಿಗೂ ಉಂಟಾಗುತ್ತದೆ. ಭಾರತ-ಪಾಕಿಸ್ಥಾನ ಕಾರ್ಗಿಲ್ ಯುದ್ಧ ಕುರಿತ ಚಿತ್ರಕಲಾ ಸ್ಪರ್ಧೆಯಲ್ಲಿ ತಾವೆಲ್ಲ ಮಕ್ಕಳು ಪಾಲ್ಗೊಳ್ಳಬೇಕು. ಈ ಶಾಲೆಯಲ್ಲಿ ಔಷದ ವನವನ್ನು ಪ್ರಾರಂಭಿಸಲಾಗಿದೆ. ಮಕ್ಕಳು ಅವುಗಳಿಗೆ ನೀರನ್ನು ಹಾಕಿ ಬೆಳೆಸಬೇಕು. ಮಕ್ಕಳ ವ್ಯಕ್ತಿತ್ವ ವಿಕಸನ ನಮ್ಮ ಸಂಸ್ಥೆಯ ಗುರಿ” ಎಂದು ಹೇಳಿದರು.

ಅತಿಥಿಗಳು, ಸಂಸ್ಥೆಯ ಪದಾಧಿಕಾರಿಗಳು ಮತ್ತು ಮಕ್ಕಳು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸೇವಾಧೀಕ್ಷಾ ಅಧಿಕಾರಿ ವಿಷ್ಣು ಹೆಗಡೆ ಅವರು ಕದಂಬ ಇಂಟರ್ಯಾಕ್ಟ್ ಕ್ಲಬ್ ಸದಸ್ಯರಾದ ಅಧ್ಯಕ್ಷೆ ಕು.ಮಾನ್ಯಶ್ರೀ , ಉಪಾಧ್ಯಕ್ಷೆ ಕು.ಚಂದನಾ ವಿ. ಕೆ., ಕಾರ್ಯದರ್ಶಿ ಕು.ಪ್ರೀತಿ ಹಾಗೂ ಖಜಾಂಚಿ ಗಗನ ಹಳ್ಳೇರ್ ಇವರಿಗೆ ಪದಗ್ರಹಣ ಬೋಧಿಸಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು “ಶಾಲೆ ಎನ್ನುವುದು ಗುರು-ಶಿಷ್ಯ ಸಂಬಂಧದ ದೇವಾಲಯ. ಈ ಸಂಬಂಧದ ಬಗ್ಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಆದ್ಯತೆ. ಗುರುಗಳಲ್ಲಿ ತಾಯಿಗೆ ಪ್ರಥಮ ಹಾಗೂ ಪ್ರಮುಖ ಸ್ಥಾನ. ಅಂತಹ ತಾಯಂದಿರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ.
ಈ ಇಂಟರ್ಯಾಕ್ಟ್ ಕ್ಲಬ್ ಮೂಲಕ ರೋಟರಿಯ ಸೇವಾ ಕಾರ್ಯ ನಡೆಸುವ ಕಿರುಪ್ರಯತ್ನ. ಈ ಶಾಲೆಯ, ಕೇವಲ ಒಂದು ವರ್ಷದ ಅಲ್ಪ ಅನುಭವ ಹೊಂದಿರುವ, ಮಾತನಾಡುವ ಶಿಕ್ಷಕಿ ಮಾತು ಬರದ ಮಕ್ಕಳಿಗೆ ಕಾರ್ಯಕ್ರಮದ ವಿವರಗಳನ್ನು ಸಂಜ್ಞೆಯ ಮೂಲಕ ಸಂವಹನ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಶಿರಸಿ ರೋಟರಿಯ ಅಡಿಯಲ್ಲಿ 10 ಕ್ಲಬ್ ಗಳಿವೆ. ಆ ಎಲ್ಲಾ ಗುಂಪುಗಳ ನಡುವೆ ಸ್ಪರ್ಧೆ ನಡೆದಾಗ ಈ ಶಾಲೆಯ ಮಕ್ಕಳು ಪ್ರಥಮ ಸ್ಥಾನ ಪಡೆಯಲಿ” ಎಂದು ಹೇಳಿದರು.

ಸೇವಾ ದೀಕ್ಷೆ ಪಡೆದ ನೂತನ ಪದಾಧಿಕಾರಿಗಳು ಸಂಜ್ಞಾ ಭಾಷೆಯ ಮೂಲಕ ರೋಟರಿ ಕ್ಲಬ್ಬಿನ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು. ನಂತರ ರೋಟರಿ ಕ್ಲಬ್ ವತಿಯಿಂದ ಶಾಲೆಗೆ ಕ್ರೀಡಾ ಸಾಮಗ್ರಿ ಹಾಗೂ ಡ್ರಮ್ ಸೆಟ್ ಹಸ್ತಾಂತರ ಮಾಡಲಾಯಿತು. ಮೂರು ವರ್ಷ ಎನ್.ಸಿ.ಸಿ. ತರಬೇತಿ ಪಡೆದ ಡಾ.ಸುಮನ ಹೆಗಡೆಯವರು ಸೈಡ್ರಮ್ ಹಾಗೂ ಕ್ರೀಡಾ ಶಿಕ್ಷಕ ಸದಾನಂದ ಪಟಗಾರ ಅವರು ಡೋಲ್ ಡ್ರಮ್ ನುಡಿಸಿದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಆಯಿತು.

ಶಾಲೆಯ ಕ್ರೀಡಾ ಶಿಕ್ಷಕ ಸದಾನಂದ ಪಟಗಾರ ಅವರು: “ನಮ್ಮ ಮಕ್ಕಳಿಗೆ ಈ ರೀತಿಯ ಪ್ರೋತ್ಸಾಹ ನೀಡಿದ್ದಕ್ಕೆ ರೋಟರಿ ಸಂಸ್ಥೆಗೆ ನಾವೆಲ್ಲರೂ ಕೃತಜ್ಞರು. ರೋಟರಿಯವರು ಒದಗಿಸಿದ ಎಲ್ಲ ಸಲಕರಣೆಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಬಳಕೆ ಮಾಡುತ್ತೇವೆ. ರೋಟರಿ ಈ ಶಾಲೆಯ ಪ್ರಾರಂಭದಿಂದಲೂ ನೆರವು ನೀಡುತ್ತ ಬಂದಿದೆ. ಈ ಸಹಕಾರ ಸದಾ ಮುಂದುವರಿಯಲಿ” ಎಂದು ಕೋರಿದರು.

“ಬೆಂಕಿಯ ಆವಿಷ್ಕಾರ ಮನುಕುಲದ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ್ದು. ನಂತರದ ಆವಿಷ್ಕಾರ ಚಕ್ರ. ಅದನ್ನು ತನ್ನ ಲಾಂಛನವಾಗಿ ಸ್ಬೀಕರಿಸಿರುವ ರೋಟರಿಯ ಸಂಬಂಧ ಈ ಸಂಸ್ಥೆಯ ಅಭ್ಯುದಯದ ಪಯಣದಲ್ಲಿ ಒಂದು ಮೈಲಿಗಲ್ಲು. ಡಾ.ಸುಮನ ಹೆಗಡೆಯವರ ಮಾತೃತ್ವದ ಸೇವೆ ಈ ಕಾರ್ಯಕ್ಕೆ ಸ್ಫೂರ್ತಿ ತುಂಬಿದೆ. ಇಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರಿಗೆ ಪಿಂಚಣಿ ಇಲ್ಲ. ಯಾವ ಸೌಲಭ್ಯಗಳೂ ಇಲ್ಲ. ಇದು ತುಂಬಾ ಖೇದದ ಸಂಗತಿ. ನಮ್ಮ ಎಲ್ಲ ಪ್ರಯತ್ನಗಳು, ಒಂದು ಪ್ರಶಾಂತತೆ ಪಡೆಯಲು. ಸಮಾಜ ಈ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಾಗ ಅಂತಹ ನೋವುಗಳೆಲ್ಲ ಖಂಡಿತಾ ದೂರ ಆಗುತ್ತವೆ.
ಈ ಮಕ್ಕಳಿಗೆ ಆಂಗ್ಲ ಭಾಷೆಯ ಬೋಧನೆ ಪಠ್ಯ ವಿಷಯ ಅಲ್ಲದಿದ್ದರೂ ಪ್ರಸಕ್ತ ಸಾಲಿನಿಂದ ಅದನ್ನು ಬೋಧಿಸಲು ಪ್ರಾರಂಭಿಸಲಾಗಿದೆ. ಶಾಲೆಯಲ್ಲಿ ಕಲಿತ ಮಕ್ಕಳ ಸಾಧನೆಗಳನ್ನು ಉಲ್ಲೇಖ ಮಾಡಿ ಸಮಾಜ ಅವಕಾಶ ಕಲ್ಪಿಸಿಕೊಟ್ಟರೆ ಈ ಮಕ್ಕಳು ಏನನ್ನೂ ಸಾಧಿಸಬಲ್ಲರು” ಎಂದು ಸಂಸ್ಥೆಯ ಕಾರ್ಯದರ್ಶಿ ಎಂ. ಎಂ. ಭಟ್ಟ ಕಾರೇಕೊಪ್ಪ ಹೇಳಿ ಎಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸಿದರು.

300x250 AD

ಶಾಲೆಯ ಮಕ್ಕಳ ಭರತನಾಟ್ಯ ಮತ್ತು ಕೋಲಾಟ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಡಾ.ಸುಮನ ಹೆಗಡೆಯವರ ಭಜನೆ ಹಾಗೂ ನಂತರ ರಾಷ್ಟ್ರಗೀತೆಯೊಡನೆ ಕಾರ್ಯಕ್ರಮ ಮುಕ್ತಾಯವಾಯಿತು.

ಶಾಲೆಯ ಅಂಗಳದಲ್ಲಿ ಶಂಕಪುಷ್ಪ, ಧಾತ್ರಿ, ಮಂಡೂಕಪರ್ಣಿ, ನಿತ್ಯಪುಷ್ಪ, ಮುಂತಾದ ವನಸ್ಪತಿ ಸಸ್ಯಗಳನ್ನು ನೆಟ್ಟು ಅವುಗಳ ನಾಮ ಫಲಕ ಅಳವಡಿಸಿ ಔಷಧಿವನ ಪ್ರಾರಂಭಿಸಲಾಯಿತು.

ವೇದಿಕೆಯ ಮೇಲೆ ಸಂಸ್ಥೆಯ ಅಧ್ಯಕ್ಷ ನಾರಾಯಣ ಹೆಗಡೆ ಗಡಿಕೈ, ಇಂಟರ್ಯಾಕ್ಟ್ ಕ್ಲಬ್ಬಿನ ಹರೀಶ ಹೆಗಡೆ ಕಡ್ಲೆ ಮತ್ತು ನಾಗರಾಜ ಹೆಗಡೆ ಕಂಪ್ಲಿ, ರೋಟರಿ ಕಾರ್ಯದರ್ಶಿ ಶ್ರೀಮತಿ ಸರಸ್ವತೀ ಹೆಗಡೆ, ಮುಂತಾದವರು ಉಪಸ್ಥಿತರಿದ್ದರು.

ಶಾಲಾ ಶಿಕ್ಷಕಿ ಶ್ರೀಮತಿ ದೇವಕಿಯವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

Share This
300x250 AD
300x250 AD
300x250 AD
Back to top