ಶಿರಸಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆಯಂತೆ ಬನವಾಸಿಯ ಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಗವಳ್ಳಿ ಗ್ರಾಮದಲ್ಲಿ ವರದಾ ನದಿ ನೀರು ರೈತರ ಹೊಲಗಳಿಗೆ ನುಗ್ಗಿ ನೆರೆ ಉಂಟಾದ ಪ್ರದೇಶಗಳಿಗೆ ಬಿಜಿಪಿಯ ಪ್ರಮುಖರು ಮತ್ತು ಕಾರ್ಯಕರ್ತರ ತಂಡ ಭೇಟಿ ನೀಡಿ ಸ್ಥಳೀಯರೊಂದಿಗೆ ನೆರೆ ಕುರಿತು ಮಾಹಿತಿ ಪಡೆದು,ಅಹವಾಲು ಸ್ವೀಕರಿಸಿ,ಚರ್ಚಿಸಿದರು.
ಕಳೆದ ವಾರ ಸುರಿದ ಭೀಕರ ಮಳೆಯಿಂದಾಗಿ ವರದಾ ನದಿ ತುಂಬಿ ಹರಿಯುತ್ತಿದ್ದು,ಬನವಾಸಿ ಭಾಗದ ಮೊಗವಳ್ಳಿ ಗ್ರಾಮ ಹಾಗೂ ಸುತ್ತಲಿನ ಕೆಲವು ಕಡೆಗಳಲ್ಲಿ ರಸ್ತೆ ಸಂಪರ್ಕ ಕಡಿತವಾಗಿತ್ತು ಮತ್ತು ಹೊಲಗಳಲ್ಲೆಲ್ಲ ಇನ್ನೂ ನೀರು ತುಂಬಿಕೊಡಿದ್ದು, ಅಪಾರ ಪ್ರಮಾಣದ ಭತ್ತ,ಮತ್ತು ಅಡಿಕೆ ತೋಟಗಳಿಗೆ ಹಾನಿ ಸಂಭವಿಸಿದೆ.
ಅಲ್ಲಿಯ ಸಮಸ್ಯೆ, ಹಾನಿ ಮತ್ತು ಪರಿಹಾರೋಪಾಯಗಳ ಕುರಿತು ಸ್ಥಳೀಯರೊಂದಿಗೆ ಚರ್ಚೆ ನಡೆಸಿದರು.
ಸಂಸದರ ಸೂಚನೆಯ ಮೇರೆಗೆ ನೆರೆಯಿಂದಾದ ಹಾನಿ ಮತ್ತು ಸಮಸ್ಯೆ ಅರಿಯಲು ಬಂದಿದ್ದೇವೆ, ಸಂಸದರಿಗೆ ಈ ಬಗ್ಗೆ ಮಾಹಿತಿ ನೀಡಿ, ಸಂಸತ್ ಅಧಿವೇಶನ ಮುಗಿದ ಬಳಿಕ ಸಂಸದರು ಸ್ಥಳಕ್ಕೆ ಭೇಟಿ ನೀಡಿ ಇಲ್ಲಿ ಪ್ರತೀವರ್ಷ ನೆರೆಯಿಂದಾಗುವ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಸರ್ಕಾರ ಮಟ್ಟದಲ್ಲಿ ಪ್ರಯತ್ನ ಕೈಗೊಳ್ಳುವಂತೆ ಮಾಡಲಾಗುವುದು ಎಂದು ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ತಿಳಿಸಿದರು.ಹಾಗೂ ಸರ್ಕಾರ ಕೂಡಲೇ ಇಲ್ಲಿಯ ಹಾನಿ ಪರೀಶೀಲನೆ ನಡೆಸಿ ಸೂಕ್ತ ಪರಿಹಾರೋಪಾಯ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಭೇಟಿ ನೀಡಿದ ತಂಡದಲ್ಲಿ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಪಕ್ಷದ ಪ್ರಮುಖರಾದ ಎಲ್.ಟಿ. ಪಾಟೀಲ್, ಉಮೇಶ್ ಭಾಗ್ವತ, ಉಷಾ ಹೆಗಡೆ, ಮಂಜುನಾಥ್ ಪಾಟೀಲ್,ಪ್ರೇಮ್ ಕುಮಾರ್, ಅರವಿಂದ ಶೆಟ್ಟಿ,ಮಂಜುನಾಥ ನಾಯ್ಕ,ಗಣೇಶ ಸಣ್ಣಲಿಂಗಣ್ಣನವರ್,ವಿಶ್ವನಾಥ್ ಹಾದಿಮನಿ, ರಾಘವೇಂದ್ರ ಭಟ್ ಹಾಸಣಗಿ,ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು, ಶಕ್ತಿಕೇಂದ್ರ ಮತ್ತು ಬೂತ್ ಪ್ರಮುಖರು ಇದ್ದರು.