ಶಿರಸಿ: ತಾಲೂಕಿನಲ್ಲಿ ಜುಲೈ ತಿಂಗಳಲ್ಲಿ ಅಧಿಕ ಮಳೆಯಾಗಿದ್ದು ತಾಲೂಕಿನ ಪ್ರಮುಖ ಬೆಳೆಯಾದ ಅಡಿಕೆಗೆ ಕೊಳೆ ರೋಗ ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು ಈ ಕೆಳಗಿನ ನಿಯಂತ್ರಣ ಕ್ರಮ ಕೈಗೊಳ್ಳಬೇಕಾಗಿದೆ.
ಅಡಿಕೆ ಕಾಯಿ ಕೊಳೆರೋಗ ನಿಯಂತ್ರಣಕ್ಕೆ ಈಗಾಗಲೇ ಶೇಕಡಾ 1ರ ಬೋರ್ಡೋ ದ್ರಾವಣ ಸಿಂಪಡಣೆ ಮಾಡಿ 25-30 ದಿನಗಳಾಗಿದ್ದಲ್ಲಿ ಮಳೆ ಕಡಿಮೆಯಾದಾಗ ಮುಂಜಾಗ್ರತೆಯ ದೃಷ್ಟಿಯಿಂದ ಮತ್ತೊಮ್ಮೆ ಬೋರ್ಡೋ ದ್ರಾವಣ ಸಿಂಪಡಿಸಬೇಕು.
ಕೊಳೆ ರೋಗ ಕಾಣಿಸಿಕೊಂಡಲ್ಲಿ ತಕ್ಷಣದಲ್ಲಿ ಕಾಯಿ ಕೊಳೆ ರೋಗ ಪಿಡಿತ ಅಡಿಕೆ ಮರದ ಕೊನೆಗಳಿಗೆ ಮತ್ತು ಕೆಳ ಭಾಗದ ಮೂರ್ನಾಲ್ಕು ಅಡಿಕೆ ಹೆಡೆಗಳಿಗೆ ಹಾಗೂ ಸುತ್ತಲಿನ 3-4 ಮರಗಳಿಗೆ ಮೆಟಲಾಕ್ಸಿಲ್ 35 ಡಬ್ಲೂ.ಎಸ್ 1 ಗ್ರಾಂ ಅಥವಾ ಮೆಟಲಾಕ್ಸಿಲ್ ಎಂ.ಜೆಡ್ 2 ಗ್ರಾಂ ಅಥವಾ ಮೆಟಲಾಕ್ಸಿಲ್+ ಮ್ಯಾಂಕೊಜೆಬ್ ಇರುವ ಶೀಲೀಂಧ್ರ ನಾಶಕವನ್ನು 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಮತ್ತು ಒಂದು ವಾರದೊಳಗೆ ಸದರಿ ತೋಟಕ್ಕೆ ಶೇಕಡಾ 1ರ ಬೋರ್ಡೊ ದ್ರಾವಣ ಸಿಂಪಡಿಸಬೇಕು. ಕೊಳೆ ರೋಗ ಪೀಡಿತ ಅಡಿಕೆ ಕಾಯಿಯನ್ನು ಹೆಕ್ಕಿ ತೋಟದಿಂದ ಹೊರಹಾಕಬೇಕು.