ಜೋಯಿಡಾ: ತಾಲೂಕಿನ ಅಣಶಿ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಅಣಶಿ ಶಾಲೆಯು ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ ಚಿಕ್ಕಬಳ್ಳಾಪುರ ವತಿಯಿಂದ ರಾಜ್ಯಮಟ್ಟದ ಹಸಿರು ನೈರ್ಮಲ್ಯ ಅಭ್ಯುಧಯ ಶಾಲಾ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಯು 10,000 ರೂ.ಗಳ ನಗದು ಹಾಗೂ ಆಕರ್ಷಕ ಪಾರಿತೋಷಕ ಒಳಗೊಂಡಿದೆ. ಜೊತೆಗೆ ಶಾಲೆಯ ಆಕರ್ಷಕ ಪ್ರದರ್ಶನ ಫೋಟೋಗಳನ್ನು ಟ್ರಸ್ಟ್ನ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಶಾಲೆಯಲ್ಲಿ ಕೈಗೊಂಡ ಪರಿಸರ ಸ್ನೇಹಿ ಚಟುವಟಿಕೆಗಳು, ಕಲಿಕಾ ಚಟುವಟಿಕೆಗಳು,ಶಾಲೆಯ ಸ್ವಚ್ಛತೆ, ಶಿಸ್ತು ಆಧರಿಸಿ ಈ ಪ್ರಶಸ್ತಿ ನೀಡಲಾಗಿದೆ. ಹಸಿರು ನೈರ್ಮಲ್ಯ ಅಭ್ಯುಧಯ ಶಾಲಾ ಪ್ರಶಸ್ತಿ ಅರ್ಜಿ ಸಲ್ಲಿಸಿದ ನಿಮಿತ್ತ ಇತ್ತೀಚಿಗೆ ಶ್ರೀ ಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ತಂಡ ಶಾಲೆಯ ಪ್ರಗತಿ ವರದಿ ಪರಿಶೀಲಿಸಿ ಪ್ರಶಂಸಿಸಿದೆ. ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಟ್ರಸ್ಟ್ನ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ 45ನೇ ವರ್ಷದ ಜನ್ಮದಿನದ ಅಂಗವಾಗಿ ಆಯ್ದ ಉತ್ತಮ 100 ಸರ್ಕಾರಿ ಶಾಲೆಗಳಿಗೆ ರಾಜ್ಯ ಮಟ್ಟದಲ್ಲಿ ಈ ಪ್ರಶಸ್ತಿಯನ್ನು ನೀಡುತ್ತಿದ್ದಾರೆ.ಈಗಾಗಲೇ ಈ ಸಂಸ್ಥೆಯವರು ಪೂರಕ ಪೌಷ್ಠಿಕ ಆಹಾರವಾಗಿ ಸಾಯಿ ಪ್ಯೂರ್ ರಾಗಿ ಹೆಲ್ತ್ ಪೌಡರನ್ನು ಉಚಿತವಾಗಿ ರಾಜ್ಯದ ಸರ್ಕಾರಿ,ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಂದರಿಂದ ಹತ್ತನೇ ವರ್ಗದ ವಿಧ್ಯಾರ್ಥಿಗಳಿಗೆ ಹಾಲಿನ ಜೊತೆ ವಿತರಿಸಲಾಗುತ್ತಿದೆ.
ನಮ್ಮ ಶಾಲೆ ಆಯ್ಕೆ ಆಗಿದ್ದು ತುಂಬಾ ಸಂತಸ ತಂದಿದೆ.ಶಿಕ್ಷಕರ ಶ್ರಮದಿಂದ ಈ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು. ಮುಖ್ಯ ಶಿಕ್ಷಕಿ ಅಕ್ಷತಾ ಕೃಷ್ಣಮೂರ್ತಿ ಅವರು ಈಗಾಗಲೇ ಅಗತ್ಯವಿದ್ದ ಸುಮಾರು ಮೂರು ಲಕ್ಷದ ಮೌಲ್ಯದ ವಸ್ತುಗಳನ್ನು ದಾನಿಗಳಿಂದ ಸಂಗ್ರಹಿಸಿದ್ದಾರೆ. ಇವೆಲ್ಲ ಶಾಲೆಯ ಹಿರಿಮೆಯನ್ನು ಹೆಚ್ಚಿಸಿವೆ ಎಂದು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಅಣಶಿಕರ ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯ ಉತ್ತಮ ಶಿಕ್ಷಕಿ ಪುರಸ್ಕ್ರತ ಹಾಗೂ ಸದ್ಯ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿಯಾದ ಅಕ್ಷತಾಕೃಷ್ಣಮೂರ್ತಿ ಶಾಲೆಯ ಸಹ ಶಿಕ್ಷಕರ ಮತ್ತು ಮಕ್ಕಳ ಸಂಪೂರ್ಣ ತೊಡಗುವಿಕೆಯಿಂದ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ. ಪ್ರಶಸ್ತಿ ವಿತರಣಾ ಕಾರ್ಯಕ್ರಮವು ಜುಲೈ 27ರ ಶನಿವಾರದಂದು ಸತ್ಯಸಾಯಿ ಗ್ರಾಮ ಮುದ್ದೇನಹಳ್ಳಿ ಚಿಕ್ಕಬಳ್ಳಾಪುರದಲ್ಲಿ ಬೆಳಿಗ್ಗೆ 9 ಗಂಟೆಗೆ ಜರುಗಲಿದೆ. ಶಾಲಾ ಆಡಳಿತ ಮಂಡಳಿ,ಶಾಲಾ ಹಳೆಯ ವಿಧ್ಯಾರ್ಥಿ ಬಳಗ,ಕ್ಷೇತ್ರ ಶಿಕ್ಷಣಾಧಿಕಾರಿಗಳು ಜೋಯಿಡಾ ಅಭಿನಂದಿಸಿದ್ದಾರೆ.