ಹೊನ್ನಾವರ:ಮನುಷ್ಯ ಸೇರಿದಂತೆ ಸಕಲ ಜೀವರಾಶಿಗಳ ಅಸ್ಥಿತ್ವ ಗಿಡ-ಮರಗಳನ್ನು ಅವಲಂಬಿಸಿದ್ದು ಕಾಡು ಹಾಗೂ ನಾಡಿನ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ ಸಿ.ಕೆ. ಅಭಿಪ್ರಾಯಪಟ್ಟರು.
ಕಾಮಕೋಡ ದುರ್ಗಮ್ಮ ದೇವಸ್ಥಾನ,ಅರಣ್ಯ ಇಲಾಖೆ, ಗ್ರಾಮ ಪಂಚಾಯತ ಚಿಕ್ಕನಕೋಡ ಹಾಗೂ ಕಾಮಕೋಡ ಪರಿಸರ ಕೂಟ ಇವುಗಳ ಸಹಯೋಗದಲ್ಲಿ ಹೆರಾವಲಿ ಗ್ರಾಮದ ಕಾಮಕೋಡ ದೇವರಕಾಡಿನಲ್ಲಿ ಮಂಗಳವಾರ ನಡೆದ ವನಮಹೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪರಿಸರದಲ್ಲಿ ಏರುಪೇರಾದರೆ ಅಮಾಯಕ ಜನರು ಬಲಿಯಾಗಬೇಕಾಗುತ್ತದೆ ಎನ್ನುವುದಕ್ಕೆ ಶಿರೂರು ಭೂಕುಸಿತದ ಘಟನೆ ಜ್ವಲಂತ ಉದಾಹರಣೆ.ಮನುಷ್ಯ ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸಬೇಕು.ಅರಣ್ಯ ಒತ್ತುವರಿ,ಮರಗಳ ಅಕ್ರಮ ಕಡಿತದಿಂದ ಅರಣ್ಯ ಪ್ರದೇಶ ಕ್ಷೀಣಿಸುತ್ತಿದ್ದು ಅರಣ್ಯ ರಕ್ಷಣೆಗೆ ಜನರ ಸಹಭಾಗಿತ್ವ ಅಗತ್ಯ.ಕಾಮಕೋಡ ದೇವರಕಾಡಿನ ಅಭಿವೃದ್ಧಿಗೆ ಸರ್ಕಾರದ ಅನುದಾನ ಮಂಜೂರಾಗಿದೆ ಎಂದು ಅವರು ಹೇಳಿದರು. ನರೇಗಾ ಸಹಾಯಕ ನಿರ್ದೇಶಕ ಕೃಷ್ಣಾನಂದ ಕೆ. ಮಾತನಾಡಿ, ಮನುಷ್ಯನ ದುರಾಸೆ ನೈಸರ್ಗಿಕ ವಿಕೋಪಗಳಿಗೆ ಕಾರಣವಾಗುತ್ತಿದೆ.ಕಾಲಕಾಲಕ್ಕೆ ಮಳೆಯಾಗಲು ದಟ್ಟ ಅರಣ್ಯ ಅಗತ್ಯ.ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ,ಕೆರೆಗಳ ರಕ್ಷಣೆ ಮೊದಲಾದ ಪರಿಸರ ಸ್ನೇಹಿ ಕಾರ್ಯಗಳಿಗೆ ಆದ್ಯತೆ ನೀಡಬೇಕಿದ್ದು ಹಳ್ಳಿಗಳಲ್ಲಿ ಸುಧಾರಣೆಯಾದರೆ ದೇಶ ಸಮೃದ್ಧಿಯಾಗುತ್ತದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ಮುಕ್ರಿ,ಜೆಸಿಬಿ ಮೊದಲಾದ ಯಂತ್ರದ ಅತಿ ಅವಲಂಬನೆ ಮನುಷ್ಯನ ನೆಮ್ಮದಿಯನ್ನು ಕಸಿದುಕೊಳ್ಳುತ್ತಿದೆ.ಭೂಮಿಯ ಅತಿಕ್ರಮಣ ಆತಂಕ ಹುಟ್ಟಿಸುತ್ತಿದೆ.ಹಣ್ಣಿನ ಗಿಡಗಳನ್ನು ಹೆಚ್ಚು ಬೆಳೆಯುವ ಮೂಲಕ ಅರಣ್ಯ ಇಲಾಖೆ ವನ್ಯ ಜೀವಿಗಳ ಕಾಟದಿಂದ ರೈತರ ಬೆಳೆಗಳನ್ನು ರಕ್ಷಿಸಬೇಕಿದೆ.ಅರಣ್ಯ ರಕ್ಷಣೆಗೆ ನಿರಂತರ ಪ್ರಯತ್ನ ಮಾಡುತ್ತಿರುವ ಕಾಮಕೋಡ ಪರಿಸರ ಕೂಟ ಸಮಾಜಕ್ಕೆ ನೆರವಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಜಗದೀಶ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಶ ನಾಯ್ಕ ಬಡ್ನಕೋಡ್ಲು,ಭಾರತಿ ನಾಯ್ಕ,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ಲಿಂಗಾಣಿ,ವಲಯ ಅರಣ್ಯಾಧಿಕಾರಿ ಸವಿತಾ ದೇವಾಡಿಗ,ಸಹಾಯಕ ವಲಯ ಅರಣ್ಯಾಧಿಕಾರಿ ವಿಶಾಲ ಡಿ. ಭಾಗವಹಿಸಿದ್ದರು. ಕಾಮಕೋಡ ಪರಿಸರ ಕೂಟದ ಸಂಚಾಲಕ ಎಂ.ಜಿ.ಹೆಗಡೆ ವಂದಿಸಿದರು.