ಬನವಾಸಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯ ಅರ್ಭಟ ಬುಧವಾರವೂ ಮುಂದುವರೆದಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಸುರಿಯುತ್ತಿರುವ ಮಳೆಗೆ ವರದಾ ನದಿ ಉಕ್ಕಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ನದಿ ಭಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರಾರು ಎಕರೆ ಭತ್ತ, ಬಾಳೆ, ಶುಂಠಿ, ಅನಾನಸ್, ಅಡಿಕೆ ತೋಟಗಳಿಗೆ ಅಪಾರ ಪ್ರಮಾಣದ ನೀರು ಆವರಿಸಿದೆ. ಮೊಗವಳ್ಳಿ, ಭಾಶಿ, ಅಜ್ಜರಣಿ, ಕಾಂತ್ರಜಿ, ಮತ್ತುಗುಣಿ, ತಿಗಣಿ, ಯಡೂರ ಬೈಲ್ ಗ್ರಾಮಗಳ ಕೃಷಿಭೂಮಿಗಳು ಜಲಾವೃತವಾಗಿದ್ದು ಬನವಾಸಿಯ ಕೆಲ ಭಾಗಗಳಲ್ಲಿ ವರದಾ ನದಿಯ ಪ್ರವಾಹದಿಂದ ಮನೆಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ನಿರಂತರ ಮಳೆಗೆ ಮನೆ ಕುಸಿತದ ಪ್ರಮಾಣವು ಹೆಚ್ಚಾಗುತ್ತಿದೆ. ಅಲ್ಲಲ್ಲಿ ಮರಗಳು ಉರುಳುತ್ತಿವೆ.