ಶಿರಸಿ: ಜಿಲ್ಲೆಯ ಶಿರೂರುಯಲ್ಲಿನ ಗುಡ್ಡ ಕುಸಿತದ ಅವಘಡದಿಂದಾಗಿ ನಮ್ಮದೇ ಬಂಧುಗಳು ಸಾವನ್ನಪ್ಪಿದ್ದು ಅತೀವ ಸಂಕಟವನ್ನು ಉಂಟುಮಾಡಿದೆ. ಮೃತರಿಗೆ ಸದ್ಗತಿ ದೊರೆಯಲಿ ಮತ್ತು ಮೃತರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ ಕೆಲವು ದಿನಗಳಿಂದ ಜಿಲೆಯಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯ ಕಾರಣದಿಂದ ಅನೇಕ ಜೀವವೈವಿಧ್ಯಗಳು, ಗೋವುಗಳು ಸಾವನ್ನಪ್ಪಿವೆ. ಅನೇಕರ ಮನೆಗಳು ಬಿದ್ದುಹೋಗಿದ್ದು, ಜೀವನವೇ ಕಷ್ಟಕರವಾಗಿದೆ. ಕೂಡಲೇ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ತುರ್ತು ರಕ್ಷಣಾ ಕ್ರಮಗಳನ್ನು ಕೈಗೊಂಡು, ಮುಂದಾಗುವ ಅನಾಹುತಗಳನ್ನು ತಡೆಯಬೇಕಿದೆ. ಜೊತೆಗೆ ಈಗಾಗಲೇ ಮೃತರಾಗಿರುವ ಕುಟುಂಬಕ್ಕೆ ಕೂಡಲೇ ಹೆಚ್ಚಿನ ಪರಿಹಾರ ನೀಡಬೇಕು. ಜೊತೆಗೆ ಅವರ ಕುಟುಂಬಸ್ಥರಿಗೆ ಸರಕಾರಿ ಉದ್ಯೋಗವನ್ನು ನೀಡಬೇಕು.
ಭಾಜಪಾ ಜಿಲ್ಲಾಧ್ಯಕ್ಷರು ಈಗಾಗಲೇ ತುರ್ತು ಸಹಾಯಕ್ಕೆ ಧಾವಿಸಲು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಸಹ ಈಗಾಗಲೇ ಅಧಿಕಾರಿಗಳ ಸಭೆ ನಡೆಸಿದ್ದಾರೆ. ನಾನೂ ಸಹ ಬುಧವಾರದಿಂದ ಅತಿವೃಷ್ಟಿ ಉಂಟಾದ ಸ್ಥಳಕ್ಕೆ ಭೇಟಿ ನೀಡಲಿದ್ದು, ನನ್ನ ಕೈಲಾದ ಸಹಾಯ ಮಾಡಲಿದ್ದೇನೆ. ಯಾರೂ ಧೃತಿಗೆಡಬೇಡಿ. ಆದಷ್ಟು ಜನರು ಜಾಗೃತದಿಂದಿರಲು ಅವರು ಮನವಿ ಮಾಡಿದ್ದಾರೆ.