Slide
Slide
Slide
previous arrow
next arrow

‘ವೀರ ಸಾವರ್ಕರ್ ಪ್ರತಿಮೆ ಸ್ಥಾಪಿಸಿಯೇ ಸಿದ್ಧ’

300x250 AD

ಸಬೂಬು ನೀಡಿ ಪಂಚಾಯತ್‌ನಿಂದ ಅನುಮತಿಗೆ ವಿಳಂಬ: ರಾಜಕೀಯ ಕಾರಣದ ಕೈವಾಡದ ಆರೋಪ

ಯಲ್ಲಾಪುರ: ತಾಲೂಕಿನ ವಜ್ರಳ್ಳಿಯಲ್ಲಿ ವೀರ ಸಾವರ್ಕರ್ ಪ್ರತಿಮೆ ಸ್ಥಾಪನೆಗೆ ಅನುಮತಿ ಕೋರಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿ 10 ತಿಂಗಳು ಕಳೆದಿವೆ. ಇಲ್ಲದ ಸಬೂಬು ಹೇಳಿ ಅಧಿಕಾರಿಗಳು ಅನುಮತಿ ನೀಡದೇ ಸತಾಯಿಸುತ್ತಿದ್ದು, ಇದರ ಹಿಂದೆ ಶಾಸಕರ ಬೆಂಬಲಿಗರ ಕೈವಾಡವಿದೆ ಎಂದು ಸಾವರ್ಕರ್ ಪ್ರತಿಮೆ ಅನಾವರಣ ಸಮಿತಿಯ ಸಂಚಾಲಕ ವಿ.ಎನ್.ಭಟ್ಟ ನಡಿಗೆಮನೆ ಆರೋಪಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಅಕ್ಟೋಬರ್ ತಿಂಗಳಲ್ಲಿ ಪ್ರತಿಮೆ ಸ್ಥಾಪನೆಗೆ ಸಂಕಲ್ಪಿಸಿ, ಸ್ವರ್ಣವಲ್ಲೀ ಶ್ರೀಗಳ ಆಶೀರ್ವಾದ ಪಡೆದು, ಸಮಿತಿ ರಚಿಸಲಾಯಿತು. ವಜ್ರಳ್ಳಿ ಬಸ್ ತಂಗುದಾಣದ ಎದುರು ಪ್ರತಿಮೆ ಸ್ಥಾಪನೆಗೆ ಜಾಗ ನೀಡುವಂತೆ ಗ್ರಾಮ ಪಂಚಾಯಿತಿಗೆ ಮನವಿ ನೀಡಲಾಗಿತ್ತು. 10 ತಿಂಗಳು ಕಳೆದರೂ ಅನುಮತಿ ನೀಡಿಲ್ಲ, ಕೇಳಿದರೆ ಕೆಲ ಸದಸ್ಯರ ವಿರೋಧವಿದೆ ಎಂಬ ಮಾತು ಪಿಡಿಒ ಹಾಗೂ ಅಧ್ಯಕ್ಷರಿಂದ ಕೇಳಿ ಬರುತ್ತಿದೆ. ಶಾಸಕರ ಬೆಂಬಲಿಗರ ಕುಮ್ಮಕ್ಕಿನಿಂದ ಈ ರೀತಿ ಅನ್ಯಾಯ ನಡೆಯುತ್ತಿದೆ ಎಂದು ದೂರಿದರು.
ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ನೋಡೆಲ್ ಅಧಿಕಾರಿ ವಿರೋಧ ವ್ಯಕ್ತಪಡಿಸಿ, ಪ್ರತಿಮೆ ಸ್ಥಾಪನೆ ಬಗ್ಗೆ ಠರಾವು ಮಾಡಲು ಕಾಯ್ದೆಯಲ್ಲಿ ಅವಕಾಶವಿಲ್ಲ ಎಂದಿದ್ದಾರೆ.‌ ಗ್ರಾ.ಪಂ ಉಪಾಧ್ಯಕ್ಷರು ನಮ್ಮನ್ನು ಹೊರಹಾಕಿ ಸಭೆ ನಡೆಸುವಂತೆ ತಿಳಿಸಿದ್ದಾರೆ. ಈ ರೀತಿ ಸಾರ್ವಜನಿಕರಿಗೆ ಅವಮಾನ ಮಾಡಿರುವುದು ಖಂಡನೀಯ ಎಂದರು.
ಜಿ.ಪಂ ಮಾಜಿ ಸದಸ್ಯ ಉಮೇಶ ಭಾಗ್ವತ ಮಾತನಾಡಿ, ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡುವ ಅವಕಾಶ ಗ್ರಾಮ ಪಂಚಾಯಿತಿಗೆ ಇಲ್ಲ ಎಂದು ಪಿಡಿಒ ಗ್ರಾಮಸಭೆಗೆ ತಪ್ಪು ಮಾಹಿತಿ ನೀಡಿದ್ದಾರೆ. ಪಂಚಾಯತ ರಾಜ್ ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆ. ಆದರೂ ಕಾನೂನನ್ನು ಅರಿತುಕೊಳ್ಳದೇ ಅಧಿಕಾರಿಗಳು ಜನರ ದಾರಿ ತಪ್ಪಿಸುವುದು ಸರಿಯಲ್ಲ. ಏನೇ ವಿರೋಧಗಳು ಎದುರಾದರೂ ಅದೇ ಸ್ಥಳದಲ್ಲಿ ಪ್ರತಿಮೆ ಸ್ಥಾಪಿಸಲಾಗುವುದು ಎಂದರು.
ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ವೀರ ಸಾವರ್ಕರ್ ಪ್ರತಿಮೆ ಸ್ಥಾಪನೆಗೆ ವಿರೋಧಿಸಿರುವುದು ಖಂಡನೀಯ. ಪ್ರತಿಮೆ ಸ್ಥಾಪನೆಯವರೆಗೂ ಪಕ್ಷ ಸಮಿತಿಯ ಬೆಂಬಲಕ್ಕೆ ನಿಲ್ಲಲಿದೆ ಎಂದರು.
ಸಮಿತಿಯ ಪ್ರಮುಖರಾದ ಜಿ.ಆರ್.ಭಾಗ್ವತ, ಮಹೇಶ ಗಾಂವ್ಕರ, ನವೀನ ಕಿರಗಾರೆ, ರಾಜಶೇಖರ ಗಾಂವ್ಕರ, ರಾಘವೇಂದ್ರ ಭಟ್ಟ, ನಾರಾಯಣ ಭಟ್ಟ, ತಿಮ್ಮಣ್ಣ ಕೋಮಾರ, ತಿಮ್ಮಣ್ಣ ಗಾಂವ್ಕರ, ಬಿಜೆಪಿ ಮಾಧ್ಯಮ ಸಂಚಾಲಕ ಕೆ.ಟಿ.ಹೆಗಡೆ ಇತರರಿದ್ದರು.

300x250 AD

Share This
300x250 AD
300x250 AD
300x250 AD
Back to top