ಅಂಕೋಲಾ: ತಾಲೂಕಿನ ಕನಕನಹಳ್ಳಿ ಸುಬ್ಬ ಸಿದ್ದಿ ಎಂಬುವವರ ತೋಟದಲ್ಲಿ ಸೋಮವಾರ ಮಧ್ಯಾಹ್ನ ಕಂಡುಬಂದ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ರಕ್ಷಕ ಸ್ನೇಕ್ ಸೂರಜ್ ಸಹಕಾರದಿಂದ ರಕ್ಷಿಸಲಾಯಿತು.
ತೋಟದ ಬೇಲಿಯ ಬಳಿ ಅವಿತಿದ್ದ ಕಾಳಿಂಗ ಸರ್ಪ ಸ್ಥಳೀಯರಿಗೆ ಆತಂಕ ಮೂಡಿಸಿತ್ತು. ಕಡುಗಪ್ಪು ಬಣ್ಣದ ಕಿಂಗ್ ಕೋಬ್ರಾ ಕಂಡು ಜನರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ಇಲಾಖೆಯ ಅಧಿಕಾರಿಗಳು ಸ್ನೇಕ್ ಸೂರಜ್‌ರನ್ನು ಕರೆಯಿಸಿ ಅವರ ಸಹಕಾರದಿಂದ ಕಾಳಿಂಗ ಸರ್ಪವನ್ನು ರಕ್ಷಿಸಿ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟರು. ಇದು ಸ್ನೇಕ್ ಸೂರಜ್‌ನ 13 ನೇ ಕಾಳಿಂಗ ಸರ್ಪದ ರಕ್ಷಣೆಯಾಗಿರುವುದು ವಿಶೇಷ. ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಮೆಹಬೂಬ್ ಸಾಬ್ ಅಂಕಲಿ, ಗಸ್ತು ಅರಣ್ಯ ಪಾಲಕ ವಿಠ್ಠಲ್ ಕೋವಳ್ಳಿ, ಸ್ಥಳೀಯರಾದ ಹರೀಶ, ಸಂತೋಷ, ಶಾಜಿ ಸಹಕರಿಸಿದರು.