ಭಟ್ಕಳ: ಡಾ. ಸಚಿನ್ ಭಟ್ಟ ಹಾಗೂ ಪ್ರೊ. ಅಲಕಾ ಅನಂತ್ ಅವರಿಗೆ ಕರ್ನಾಟಕ ಸರ್ಕಾರದ ಚೊಚ್ಚಲ ‘ತಳಹಂತದ ನಾವೀನ್ಯತಾ ಪುರಸ್ಕಾರ’ (ಗ್ರಾಸ್‌ರೂಟ್ ಇನ್ನೋವೆಶನ್ ಅವಾರ್ಡ್) ೨೦೨೪ನ್ನು ಘೋಷಣೆ ಮಾಡಿದೆ. ಸುಸ್ಥಿರ ಅಭಿವೃದ್ಧಿ ಹಾಗೂ ತಳ ಮತ್ತು ಗ್ರಾಮೀಣ ಹಂತದ ಜನರಿಗೆ ನೆರವಾಗುವ ತಂತ್ರಜ್ಞಾನದ ಅಭಿವೃದ್ಧಿಯನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರವು ಈ ವರ್ಷದಿಂದ ಗ್ರಾಸ್‌ರೂಟ್ ಇನ್ನೋವೆಶನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಪುಸ್ಕಾರಕ್ಕೆ ಪತಿ-ಪತ್ನಿ ಆಯ್ಕೆಯಾಗಿರುವುದು ಶ್ಲಾಘನೀಯವಾಗಿದೆ.
ಡಾ. ಸಚಿನ್ ಭಟ್ಟ ತಮ್ಮ ಪತ್ನಿಯೊಡನೆ ಜಿಲ್ಲೆಯ ಕುಮಟಾದಲ್ಲಿ ‘ಅಲರ್’ ಎಂಬ ಸ್ಟಾರ್ಟಪ್‌ನ್ನು ಪ್ರಾರಂಭಿಸಿದ್ದು, ಈ ಸ್ಟಾರ್ಟಅಪ್‌ನ ಮೂಲಕ ನಡೆದ ಎರಡು ಸಂಶೋಧನೆಗಳಿಗೆ ರಾಜ್ಯ ಸರಕಾರದಿಂದ ಪುರಸ್ಕಾರ ಲಭಿಸಿದೆ. ಶಸ್ತ್ರಚಿಕಿತ್ಸೆಯಲ್ಲಿ ಶುಶ್ರೂಕರಿಗೆ (ನರ್ಸ್) ನೆರವಾಗುವ ತಂತ್ರಜ್ಞಾನ ಹಾಗೂ ಕಟ್ಟಡ ನಿರ್ಮಾಣದಲ್ಲಿ ಮಣ್ಣಿನ ಧಾರಣಾ ಸಾಮರ್ಥ್ಯವನ್ನು ಅಳೆಯುವ ಉಪಕರಣವನ್ನು ಕಂಡುಹಿಡಿದದ್ದಕ್ಕಾಗಿ ರಾಜ್ಯ ಸರ್ಕಾರ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ. ಕೃತಕ ಬುದ್ಧಿಮತ್ತೆಯ ಸಂಶೋಧಕರಾಗಿರುವ ಡಾ. ಸಚಿನ್ ಭಟ್ಟ ತಮ್ಮ ಸಂಶೋಧನೆಗಳಿಗೆ ಈ ಹಿಂದೆ ಇಸ್ರೋ, ರಾಜ್ಯ ಸರ್ಕಾರ ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದನ್ನು ಸ್ಮರಿಸಬಹುದು.