ಭಟ್ಕಳ: ಜಿಲ್ಲೆಯ ಸುಪ್ರಸಿದ್ಧ ಮಾರಿಜಾತ್ರೆಯಲ್ಲಿ ಒಂದಾದ ಭಟ್ಕಳದ ಮಾರಿ ಜಾತ್ರೆಯು ಜು.31 ಹಾಗೂ ಆ.1ರಂದು ಅದ್ದೂರಿಯಾಗಿ ನಡೆಯಲಿದ್ದು ತಾಲೂಕು ಹಾಗೂ ಜಿಲ್ಲೆಯ ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡು ಮಾರಿಯಮ್ಮನ ಆಶೀರ್ವಾದ ಪಡೆದುಕೊಳ್ಳುವಂತೆ ಮಾರಿಕಾಂಬಾ ದೇವಸ್ಥಾನ ಆಡಳಿತ ಕಮಿಟಿಯ ಅಧ್ಯಕ್ಷ ಪರಮೇಶ್ವರ ನಾಯ್ಕ ಹೇಳಿದರು.
ಅವರು ಸೋಮವಾರ ಮಾರಿಕಾಂಬಾ ದೇವಸ್ಥಾನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಜಾತ್ರಾ ಉತ್ಸವದ ಕುರಿತು ಪತ್ರಕರ್ತರ ಜೊತೆಗೆ ಮಾತನಾಡುತ್ತಿದ್ದರು.
ಈಗಾಗಲೇ ಮಾರಿ ಜಾತ್ರೆಗೆ ಸಕಲ ಸಿದ್ಧತೆಗಳು ನಡೆದಿದ್ದು ಜು.23 ಮಂಗಳವಾರರಂದು ಮೂರ್ತಿಗೆ ಅವಶ್ಯಕ ಅಮಟೆ ಮರದ ಪೂಜೆ, ಅದರ ಮುಹೂರ್ತಗಳೆಲ್ಲವು ನಡೆಯಲಿದ್ದು ಮರವನ್ನು ಕತ್ತರಿಸಿ ಅದೇ ಸ್ಥಳದಲ್ಲಿಯೇ ಒಂದು ಮೂರ್ತಿ ಬಿಂಬವನ್ನು ಸಿದ್ದ ಮಾಡಲಾಗುತ್ತದೆ.ಜು.26 ಶುಕ್ರವಾರದಂದು ಸ್ಥಳದಿಂದ ಮಾರಿ ಮೂರ್ತಿ ತಯಾರಿಕಾ ಸ್ಥಳವಾದ ಆಚಾರ್ಯ ಕುಟುಂಬದ ಮಾರಿ ಗದ್ದುಗೆಗೆ ಕರೆತರಲಾಗುವುದು. ಮತ್ತು ಅಲ್ಲಿಂದ ಜು. 30 ತನಕ ಮಾರಿ ಮೂರ್ತಿಯ ಕೆತ್ತನೆಯ ಕೆಲಸಗಳು ಮುಂದುವರೆಯಲಿದೆ. ತದನಂತರದಲ್ಲಿ ರಾತ್ರಿ ನಡೆಯಲಿರುವ ಸುಹಾಸಿನಿ ಪೂಜೆಯ ಬಳಿಕ 31 ರ ಮುಂಜಾನೆ ಮಾರಿಕಾಂಬಾ ದೇವಸ್ಥಾನದ ಗದ್ದುಗೆಗೆ ಮಾರಿ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆ ತಂದು ಪೂಜೆಸಲಿದ್ದೇವೆ. ನಂತರ 2 ದಿನಗಳ ಕಾಲ ಜಾತ್ರೆ ನಡೆಯಲಿದ್ದು. ಆ.1 ರಂದು ಸಂಜೆ 4.30ಕ್ಕೆ ಮಾರಿ ದೇವಿಗೆ ವಿಸರ್ಜನಾ ಪೂಜೆ ನೆರವೆರಿಸಿ ಭಕ್ತರು ತಲೆ ಮೇಲೆ ದೇವಿ ಮೂರ್ತಿಯನ್ನು ಹೊತ್ತು ಜಾಲಿಕೋಡಿ ಸಮುದ್ರದಲ್ಲಿ ವಿಸರ್ಜನೆ ಮಾಡಲಿದ್ದು ಬಳಿಕ ಮಾರಿ ಜಾತ್ರೆ ಮುಕ್ತಾಯಗೊಳ್ಳಲಿದೆ ಎಂದರು.
ನಂತರ ಮಾರಿಕಾಂಬಾ ದೇವಸ್ಥಾನ ಆಡಳಿತ ಕಮಿಟಿಯ ಪ್ರಧಾನ ಕಾರ್ಯದರ್ಶಿ ಶ್ರೀಧರ ಬಿ. ನಾಯ್ಕ ಮಾತನಾಡಿ ಅನಾದಿಕಾಲದಿಂದಲೂ ನಡೆದು ಬಂದ ಪದ್ಧತಿಯಂತೆ ಈ ವರ್ಷವೂ ಕೂಡ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನಡೆಸಲು ತೀರ್ಮಾನಿಸಿದ್ದು ಅದರಂತೆ ನಿಗದಿತ ದಿನದ ಕಾರ್ಯಕ್ರಮಕ್ಕೆ ಆಡಳಿತ ಮಂಡಳಿಯಿಂದ ಸಕಲ ಸಿದ್ದತೆಗಳಾಗಿವೆ. ಮಾರಿ ದೇವಿಯ ದರ್ಶನಕ್ಕೆ ಬರುವಂತಹ ಭಕ್ತರಿಗೆ ದೇವಿಯ ದರ್ಶನ, ಪೂಜಾ ಕೈಂಕರ್ಯಕ್ಕೆ ಹಾಗೂ ಭಕ್ತರ ಹರಕೆ ಸೇವೆ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಎರಡು ದಿನಗಳ ಕಾಲ ನಡೆಯಲಿರುವ ಜಾತ್ರೆಗೆ ಸಕಲ ಸಿದ್ಧತೆ ನಡೆಯಲಾಗಿದ್ದು ಭಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮಾರಿ ದೇವಿಯ ದರ್ಶನ ಪಡೆದುಕೊಳ್ಳುವಂತೆ ಕೋರಿಕೊಂಡರು.
ಈ ಸಂದರ್ಭದಲ್ಲಿ ಮಾರಿಕಾಂಬಾ ಮಾರಿಕಾಂಬಾ ದೇವಸ್ಥಾನ ಆಡಳಿತ ಕಮಿಟಿಯ ಸದಸ್ಯರಾದ ನಾರಾಯಣ ಖಾರ್ವಿ, ಮಾಹಾದೇವ ಮೊಗೇರ, ಶಂಕರ ಶೆಟ್ಟಿ, ಸುರೇಂದ್ರ ಭಟ್ಕಳಕರ, ಶ್ರೀಪಾದ ಕಂಚುಗಾರ, ಸುರೇಶ ಆಚಾರ್ಯ, ವಾಮನ ಶಿರಸಾಟ ಉಪಸ್ಥಿತರಿದ್ದರು