ಹೊನ್ನಾವರ: ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯದ ಅಡಿಯಲ್ಲಿರುವ ತೆಂಗು ಅಭಿವೃದ್ಧಿ ಮಂಡಳಿ ಪ್ರಾದೇಶಿಕ ಕಚೇರಿಯನ್ನು ಮಂಜೂರಿ ಮಾಡಬೇಕು ಮತ್ತು ತೆಂಗು ಉತ್ಪನ್ನಗಳ ಸಂಸ್ಕರಣ ಘಟಕವನ್ನು ಹೊನ್ನಾವರದಲ್ಲಿ ಸ್ಥಾಪಿಸಬೇಕು ಎಂದು ಹೊನ್ನಾವರ ಉಳಿಸಿ ಬೆಳೆಸಿ ಜನಪರ ವೇದಿಕೆಯ ವತಿಯಿಂದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಲಾಯಿತು.
ನಮ್ಮ ಜಿಲ್ಲೆಯ ಕರಾವಳಿ ಭಾಗದ ತಾಲೂಕಗಳಲ್ಲಿ ಒಟ್ಟು 7,052 ಹೆಕ್ಟೆರ್ ತೆಂಗು ಪ್ರದೇಶವಿದ್ದು ಅಂದಾಜು 32,560 ಜನ ತೆಂಗು ಬೆಳೆಯುವ ರೈತರನ್ನು ಒಳಗೊಂಡಿರುತ್ತದೆ. ಮುಂದುವರೆದು ಕರಾವಳಿ ಪ್ರದೇಶವು ವಿಫುಲ ತೆಂಗಿನ ಉತ್ಪನ್ನಗಳನ್ನು ಹೊಂದಿದ್ದು, ಬಹು ಚಿಕ್ಕ ಹಿಡುವಳಿ ಬಡರೈತರು ಈ ಬೆಳೆಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಬೆಳೆಗೆ ತಗಲುವ ವಿವಿಧ ಕೀಟ ಭಾದೆಗಳ ಹಾವಳಿಯ ತಿಳುವಳಿಕೆಯಿಲ್ಲ. ಅಲ್ಲದೆ ತೆಂಗು ಕೇವಲ ಆಹಾರ ಪದಾರ್ಥ ಮಾತ್ರವಾಗಿರದೆ ತೆಂಗಿನ ಇನ್ನುಳಿದ ಉತ್ಪನ್ನಗಳ ಸರಿಯಾದ ಬಳಕೆಯ ಮಾಹಿತಿ ಮತ್ತು ಸೌಲಭ್ಯ ಸಿಕ್ಕಿರುವುದಿಲ್ಲ. ತೆಂಗಿನ ಮರ ಹತ್ತಿಳಿಯುವ ಕಾರ್ಮಿಕರಿಗೆ ಸರಕಾರದ ಯಾವ ಸೌಲಭ್ಯಗಳೂ ಈವರೆಗೂ ಸಿಕ್ಕಿಲ್ಲ. ಹೀಗಾಗಿ ಸಂಸದರಾಗಿರುವ ತಾವು ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರದ ತೆಂಗು ಅಭಿವೃದ್ಧಿ ಮಂಡಳಿ ಪ್ರಾದೇಶಿಕ ಕಚೇರಿಯನ್ನು ಹೊನ್ನಾವರದಲ್ಲಿ ಮಂಜೂರಿ ಮಾಡಬೇಕಾಗಿಯೂ ಮತ್ತು ತೆಂಗು ಉತ್ಪನ್ನಗಳ (ಸಂಸ್ಕರಣ ಘಟಕ) ಕೈಗಾರಿಕೆಗಳನ್ನು ಸ್ಥಾಪಿಸಿ ಯುವಕರಿಗೆ ಉದ್ಯೋಗ ದೊರಕಿಸಿ ಕೊಡುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಹೊನ್ನಾವರ ಉಳಿಸಿ ಬೆಳೆಸಿ ಜನಪರ ವೇದಿಕೆಯ ಅಧ್ಯಕ್ಷ ಜಿ.ಎನ್.ಗೌಡ, ಕಾರ್ಯದರ್ಶಿ ಪ್ರಭು ಮಾಸ್ತಿ ಪಟಗಾರ, ಗೌರವಾಧ್ಯಕ್ಷ ಜಿ.ಟಿ.ಪೈ, ಖಜಾಂಚಿ ಜಗದೀಶ ನಾಯ್ಕ, ಪದಾಧಿಕಾರಿಗಳಾದ ಶ್ರೀಪಾದ ನಾಯ್ಕ, ಎಂ.ಆರ್.ಹೆಗಡೆ, ಎಸ್.ಎನ್,ನಾಯಕ, ಎಸ್.ಕೆ.ಮೇಸ್ತ, ಡಾ. ಎಸ್.ಡಿ. ಹೆಗಡೆ, ಪೀಟರ್ ಮೆಂಡಿಸ್, ರಾಘು ನಾಯ್ಕ ಮನವಿ ಸಲ್ಲಿಸಿದರು.