ಯಲ್ಲಾಪುರ: ಕಾಂಗ್ರೇಸೇತರ ಸರಕಾರವಿದ್ದಾಗ ಮಾತ್ರ ದೇಶದಲ್ಲಿ ಅಭಿವೃಧ್ದಿಯ ಕ್ರಾಂತಿ ಆಗಿದೆ.ಇದನ್ನು ಕಟ್ಟಕಡೆಯ ವ್ಯಕ್ತಿಗೂ ಮನವರಿಕೆ ಮಾಡಿಕೊಡಬೇಕಾಗಿದೆ.ಕಾಂಗ್ರೆಸ್ನ ಮೋಸದ ತಂತ್ರಕ್ಕೆ ಜನ ಬಲಿಯಾಗಿ ಈಗ ಪಶ್ಚಾತ್ತಾಪ ಪಡುವಂತಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದರು.
ಅವರು ಪಟ್ಟಣದ ಹುಲ್ಲೋರಮನೆ ದೇವಸ್ಥಾನದಲ್ಲಿ ಚಂದ್ಗುಳಿ ಮತ್ತು ನಂದೊಳ್ಳಿ ಬಿಜೆಪಿ ಶಕ್ತಿ ಕೇಂದ್ರ ಹಮ್ಮಿಕೊಂಡಿದ್ದ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ 360 ವಿವಿಧ ಯೋಜನೆಯನ್ನು ಕೊಟ್ಟರು. ಎಪ್ಪತ್ತು ವರ್ಷ ಆಳಿದ ಕಾಂಗ್ರೆಸ್ಸಿನಿಂದ ದೇಶದ ಜನತೆಗೆ ಸಿಕ್ಕಿದ್ದು ಮೋಸ. ಜನರನ್ನು ವಂಚಿಸಿ ಅಧಿಕಾರ ಲಾಭ ಪಡೆದಿದ್ದರು. ಇದರ ಪರಿಣಾಮ ದೇಶದ ಸ್ಥಿತಿ ಹೇಗಾಗಿತ್ತು ಎಂಬುದನ್ನು ನೋಡಿದ್ದೇವೆ. ಆದರೆ ಬಿಜೆಪಿಯು ರಾಜಕೀಯವಲ್ಲದೇ ಸಾಂಸ್ಕೃತಿಕ ಅಜೆಂಡಾವನ್ನೂ ನೀಡಿ ಅಧಿಕಾರಕ್ಕೆ ಬಂದಿದೆ.ಅಯೋಧ್ಯೆ ರಾಮಂದಿರ ನಿರ್ಮಾಣದ ಮೂಲಕ ದೇಶದ ಹಿಂದೂಗಳನ್ನು ಜೋಡಿಸಿದೆ ಎಂದ ಅವರು ರಾಹುಲ್ ಗಾಂಧಿ ಸ್ಟಾಲಿನ್ ರಂತಹವರಿಗೆ ಅಪ್ಪಿತಪ್ಪಿ ನಾವು ಮೈಮರೆತು ಅಧಿಕಾರ ಕೊಟ್ಟರೆ ನಮ್ಮ ಭಾರತದ ಪರಂಪರೆಯನ್ನೇ ಸರ್ವನಾಶ ಮಾಡುತ್ತಾರೆಂಬುದನ್ನು ಗಮನಿಸಬೇಕು. ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಜಗತ್ತೇ ಭಾರತವನ್ನು ದಿಟ್ಟಿಸಿ ನೋಡುತ್ತಿತ್ತು. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲು ಮಾಡುತ್ತಾರೆ ಮತ್ತು ಬಿಜೆಪಿ ಹಿಂದುಳಿದವರ ದಲಿತರ ವಿರೋಧಿ ಎಂಬ ಅಪಪ್ರಚಾರದ ಹಿನ್ನೆಲೆಯಲ್ಲಿ ಬಿಜೆಪಿ ಸ್ವಲ್ಪ ಹಿನ್ನಡೆಗೆ ಕಾರಣವಾಗಿದೆ.ಮತದಾರರು ಅಪಪ್ರಚಾರಕ್ಕೆ ಕಿವಿಗೊಟ್ಟಿದ್ದಾರೆ.ಆದರೆ ಬಿಜೆಪಿ ಎಲ್ಲಿಯೂ ಸಂವಿಧಾನದ ಬಗ್ಗೆ ಚಕಾರ ಎತ್ತಿರಲಿಲ್ಲ.
ಅಪಪ್ರಚಾರದ ಹಿಂದೆ ಬಿದ್ದು ಮೈಮರೆತು ಮತದಾರರು ಕೆಲ ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಆಶೀರ್ವಾದ ಮಾಡಿದರು ಎಂದ ಅವರು ನಮ್ಮ ಕ್ಷೇತ್ರದಲ್ಲಿ ಪ್ರಜ್ಞಾವಂತ ಮತದಾರರು ಸೂಕ್ತ ನಿರ್ಣಯದೊಂದಿಗೆ ಹೆಜ್ಜೆ ಹಾಕಿದ ಫಲ ಟೀಕಾಕಾರರಿಗೆ ಸರಿ ಉತ್ತರ ನೀಡಿದರು ಎಂದು ಹೇಳಿದರು.
ಎಲ್.ಎಸ್.ಎಂ.ಪಿ ಉಪಾಧ್ಯಕ್ಷ ಟಿ.ಆರ್. ಹೆಗಡೆ ಮಾತನಾಡಿ, ವಿಶೇಷವಾಗಿ ನಮ್ಮ ಭಾಗದಲ್ಲಿ ಜನ ಬಿಜೆಪಿಯತ್ತ ಮುಖ ಮಾಡುತ್ತಿರುವುದು ಕಂಡುಬಂದಿದೆ. ಸಿದ್ಧಾಂತದೊಂದಿಗೆ ವ್ಯವಸ್ಥಿತವಾಗಿ ಮುನ್ನೆಡೆಯಬೇಕಿದೆ.ಪಕ್ಷಾಂತರಿಗಳಿಗೆ ಮಣೆ ಹಾಕಬಾರದು. ಮುಂದೆ ಪಕ್ಷಾಂತರಿಗಳಿಗೆ ಜನ ಬುದ್ದಿ ಕಲಿಸಲಿದ್ದಾರೆಂಬುದು ಲೋಕಸಭಾ ಚುನಾವಣೆಯಲ್ಲಿ ಕಂಡಿದ್ದೇವೆ.ಕಾರ್ಯಕರ್ತರೇ ನಾಯಕರಾಗಿ ಕೆಲಸ ಮಾಡಿ ಬಿಜೆಪಿ ಶಕ್ತಿ ಏನೆಂಬುದನ್ನು ತೋರಿಸಿದ್ದಾರೆ. ಕ್ಷೇತ್ರದಲ್ಲಿ ಕಾರ್ಯಕರ್ತರು ಗೆದ್ದಿದ್ದಾರೆ ಎಂದರು. ಮುಖಂಡ ನರಸಿಂಹ ಕೋಣೆಮನೆ ಮಾತನಾಡಿ,ನಮ್ಮ ಈ ನಡೆ ಮುಂದಿನ ಸ್ಥಳಿಯ ಚುನಾವಣೆಯಲ್ಲೂ ಇರಬೇಕು ಎಂದರು.ನಾಗರಾಜ ಕವಡಿಕೆರೆ ಮಾತನಾಡಿ, ಹಿರಿಯರ ಮೇಲ್ಪಂಕ್ತಿ ಬಿಜೆಪಿಗಿರುವ ಶಕ್ತಿ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯರಾದ ಶಿವರಾಮ ಸುಬ್ರಾಯ ಭಟ್ಟ,ಗಾಣಮನೆ ತಗ್ಗು,ಸುಬ್ರಾಯ ಭಾಗ್ವತ, ಅಪ್ಪು ವಾಸುದೇವ ಆಚಾರಿ ಉಪಳೇಶ್ವರ, ಮಾದೇವ ನಾಯ್ಕ ಕೊಲ್ಲಕ್ಕಿಪಾಲ್ ಹಾಗೂ ರಾಜ್ಯದ ರೈತಸಖಿಯಾಗಿ ಪ್ರಧಾನಿಯಿಂದ ಗೌರವಿಸಲ್ಪಟ್ಟ ಶ್ರೀಲತಾ ರಾಜೀವ ಹೆಗಡೆ ಜಂಬೆಸಾಲ್ ಇವರುಗಳನ್ನು ಅಭಿನಂದಿಸಲಾಯಿತು. ಹಿರಿಯರಾದ ರಾಮೇಶ್ವರ ಕೊಂಬೆ ಅಧ್ಯಕ್ಷತೆ ವಹಿಸಿದ್ದರು. ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ನಿಕಟಪೂರ್ವ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್ ಉಪಸ್ಥಿತರಿದ್ದು ಸಾಂದರ್ಭಿಕ ಮಾತನಾಡಿದರು. ಚಂದ್ಗುಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸುಬ್ವಣ್ಣ ಉದ್ದಾಬೈಲ್ ಸ್ವಾಗತಿಸಿದರು. ನಾಗರಾಜ ಕವಡಿಕೆರೆ ಪ್ರಾಸ್ತಾವಿಕಗೈದರು.ವೆಂಕಟ್ರಮಣ ಕಿರಕುಂಭತ್ತಿ ಕಾರ್ಯಕ್ರಮ ನಿರ್ವಹಿಸಿದರು.ಸುಬ್ರಾಯ ದಾನ್ಯಾನಕೊಪ್ಪ ವಂದಿಸಿದರು.