ಹೊನ್ನಾವರ: ತಾಲೂಕಿನ ಗುಂಡಬಾಳಾದ ಆರೋಗ್ಯಮಾತಾ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತಿಗೆ ಚುನಾವಣೆ ನಡೆಯಿತು. ಒಂದು ವಾರ ಮೊದಲೆ ಚುನಾವಣಾಧಿಕಾರಿಗಳಾದ ವಿಲ್ಸನ್ ಲುಯಿಸ್ ಅಧಿಸೂಚನೆ ಹೊರಡಿಸಿ, ವಿದ್ಯಾರ್ಥಿಗಳಿಗೆ ನಾಮಪತ್ರ ಸಲ್ಲಿಸುವಂತೆ ತಿಳಿಸಿದ್ದರು. ನಂತರ ನಾಮಪತ್ರಗಳನ್ನು ಪರಿಶೀಲಿಸಿ ಚಿಹ್ನೆ ನೀಡಿ ಅರ್ಹ ಅಭ್ಯರ್ಥಿಗಳ ಪಟ್ಟಿ ತಯಾರಿಸಲಾಯಿತು. ನಂತರ ಕಣದಲ್ಲಿದ್ದ ಅಭ್ಯರ್ಥಿಗಳು ತಮಗೆ ಮತ ನೀಡುವಂತೆ ಪ್ರಚಾರ ಕೈಗೊಂಡರು. ನಂತರ ಮತದಾನದ ದಿನದಂದು ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಮತಪತ್ರದಲ್ಲಿ ಗುರುತು ಮಾಡುವ ಮೂಲಕ ಮತ ಚಲಾಯಿಸಿದರು. ಚುನಾವಣಾ ಸಿಬ್ಬಂದಿಗಳಾಗಿ ವಿದ್ಯಾರ್ಥಿಗಳೇ ಕಾರ್ಯ ನಿರ್ವಹಿಸಿದರು. ಮತ ಎಣಿಕೆಯ ನಂತರ ಮೆಥ್ಯು ಪಿಂಟೊ, ಡೆಸ್ಮಂಡ ಮಿರಾಂದಾ, ರಾಘವೇಂದ್ರ ಆಚಾರ್ಯ, ಅನ್ವಿತಾ ನಾಯ್ಕ, ಸುಮತಿ ಗೌಡ, ಸುಪ್ರಿತಾ ಶೇಟ್ ಹಾಗೂ ಯಶಸ್ವಿ ನಾಯ್ಕ ಇವರು ಶಾಲಾ ಸಂಸತ್ತಿಗೆ ಆಯ್ಕೆಯಾದರು. ಸಮಾಜ ವಿಜ್ಞಾನ ಶಿಕ್ಷಕರಾದ ಎಡ್ಡಿನ್ ಡಾಯಸ್ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಮಹತ್ವ ಹಾಗೂ ಚುನಾವಣೆಯ ವಿವಿಧ ಹಂತಗಳ ಕುರಿತು ವಿವರಿಸಿದರು. ಎಲ್ಲಾ ಶಿಕ್ಷಕರ ಸಹಕಾರದಿಂದ ಚುನಾವಣೆ ಸುಸೂತ್ರವಾಗಿ ನಡೆಯಿತು.