ಶಿರಸಿ: ಗ್ರೀನ್ಕೇರ್ ಸಂಸ್ಥೆ ಶಿರಸಿ ವತಿಯಿಂದ ಶಿರಸಿ ಹಾಗೂ ಯಲ್ಲಾಪುರ ತಾಲೂಕುಗಳಲ್ಲಿ ಯುವಕ ಯುವತಿಯರಿಗೆ ‘ಪ್ರಾಜೆಕ್ಟ್ ಕೌಶಲ್ಯ ವಿಕಾಸ’ ಯೋಜನೆಯಡಿ ಉಚಿತ ಔದ್ಯೋಗಿಕ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಜುಲೈ ಮೂರನೇ ವಾರದಿಂದ ಇದು ಆರಂಭವಾಗಲಿದೆ.
ಈ ಕುರಿತು ಸಂಸ್ಥೆಯ ಅಧ್ಯಕ್ಷ ಡಾ.ಶ್ಯಾಮಸುಂದರ್ ನಗರದ ಪತ್ರಿಕಾ ಭವನದಲ್ಲಿ ಗುರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಗ್ರೀನ್ ಕೇರ್ ಸಂಸ್ಥೆಯು ಜಿಲ್ಲೆಯ ಯುವಕ ಯುವತಿಯರಿಗೆ ಉದ್ಯೋಗಾವಕಾಶಕ್ಕೆ ಪೂರಕವಾದ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಉಚಿತವಾಗಿ ಹಮ್ಮಿಕೊಳ್ಳುವ ಉದ್ದೇಶದಿಂದ ಪ್ರಾಜೆಕ್ಟ್ ಕೌಶಲ್ಯ ವಿಕಾಸ’ ಎಂಬ ಯೋಜನೆಯನ್ನು ರೂಪಿಸಿದೆ. ಇದು ನಿರುದ್ಯೋಗ ಸಮಸ್ಯೆ ಪರಿಹರಿಸಲೂ ಸಹಕಾರಿಯಾಗಲಿದೆ ಎಂದರು.
ಯೋಜನೆಯಲ್ಲಿ 45 ದಿನಗಳ ತರಬೇತಿ ಇರಲಿದೆ. ಶಿರಸಿಯಲ್ಲಿ ವಾಣಿಜ್ಯ ಪದವೀಧರರಿಗೆ ಅಕೌಂಟ್ ಅಸಿಸ್ಟೆಂಟ್ ವಲಯದಲ್ಲಿ 30 ದಿನಗಳ ತರಬೇತಿ ಹಾಗೂ ಕನಿಷ್ಠ 10ನೇ ಉತ್ತೀರ್ಣರಾದವರಿಗೆ ಅರೋಗ್ಯ ಸಹಾಯಕ ವಲಯದಲ್ಲಿ ಆಯೋಜಿಸಿದೆ. ಯಲ್ಲಾಪುರ ತಾಲೂಕಿನಲ್ಲಿ ಕನಿಷ್ಠ 10ನೇ ತರಗತಿ ಉತ್ತೀರ್ಣರಾದ ಯುವತಿಯರಿಗಾಗಿ 45 ದಿನಗಳ ಫ್ಯಾಷನ್ ಡಿಸೈನಿಂಗ್ ಹಾಗೂ ಬ್ಯೂಟಿಶಿಯನ್ ತರಬೇತಿಯನ್ನು ಆಯೋಜಿಸಿದೆ. ಪರಿಣಿತ ಸಂಪನ್ಮೂಲ ತರಬೇತುದಾರರನ್ನು ಒಳಗೊಂಡ ತಂಡದಿಂದ ಉಚಿತ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿಯಲ್ಲಿ ಔದ್ಯೋಗಿಕ ಕೌಶಲ್ಯದ ಜೊತೆಯಲ್ಲಿ ಜೀವನ ಕೌಶಲ್ಯಾಭಿವೃದ್ಧಿಗೂ ಆದ್ಯತೆ ನೀಡಿ ಅಭ್ಯರ್ಥಿಗಳು ಸಮರ್ಥ ಉದ್ಯೋಗ ಹೊಂದುವಂತೆ ಪ್ರೇರಣೆ ನೀಡಲಾಗುತ್ತದೆ. ತರಬೇತಿಯು ಸಂಪೂರ್ಣ ಉಚಿತವಾಗಿದ್ದು ಅರ್ಹ ಆಸಕ್ತ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಹೆಚ್ಚಿನ ಮಾಹಿತಿ ಹಾಗೂ ನೊಂದಣಿಗಾಗಿ ಗ್ರೀನ್ಕೇರ್ ಸಂಸ್ಥೆ, ನಂ.346, ಸಾಗರ ರೈಸ್ ಮಿಲ್ ಹತ್ತಿರ, ವೀರಭದ್ರಗಲ್ಲಿ, ಶಿರಸಿ ಇಲ್ಲಿ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ Tel:+9108384451261, Tel:+918904558570, Tel:+918904531265ಗೆ ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಪ್ರಮುಖರಾದ ರೋಹಿಣಿ, ಜಿತೇಂದ್ರ ಕುಮಾರ್ ತೋನ್ಸೆ, ಪ್ರಶಾಂತ ಮೂಳೆ, ಸಹನಾ, ಗಜಾನನ ಭಟ್, ಉದಯ್ ಇನ್ನಿತರು ಇದ್ದರು.