ಹೊನ್ನಾವರ: ತಾಲೂಕಿನ ಮೂಡ್ಕಣಿ ಶಂಭುಲಿಂಗೇಶ್ವರ ಸಭಾಭವನದಲ್ಲಿ ಸಂಪ್ರಭಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣಾ ಕಾರ್ಯಕ್ರಮ ರವಿವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಅಳ್ಳಂಕಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ.ಜಿ.ಎಸ್.ಹೆಗಡೆ ಮಾತನಾಡಿ, ಕಳೆದ 10 ವರ್ಷಗಳಿಂದ ಮೂಡ್ಕಣಿ ಭಾಗದಲ್ಲಿ ಶೈಕ್ಷಣಿಕ ಕಾಳಜಿ ವಹಿಸುವ ಸಂಪ್ರಭಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯ ಶ್ಲಾಘನೀಯ. ಸಂಸ್ಥೆಯ ಅಧ್ಯಕ್ಷ ವಿನಾಯಕ ನಾಯ್ಕ ತಮ್ಮ ಶಿಷ್ಯ ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತದೆ ಎಂದರು. ಕರೋನಾ ಕಳೆದಿದ್ದೇವೆ.ಈಗ ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ಮೊಬೈಲ್ ಅಗತ್ಯತೆ ಇಲ್ಲ.ಮೊಬೈಲ್ ನಿಂದ ದೂರವಿರಿಸಿ ಎಂದು ಕಿವಿಮಾತು ಹೇಳಿದರು.
ಸಂಪ್ರಭಾ ಸಂಸ್ಥೆಯ ಅಧ್ಯಕ್ಷರಾದ ವಿನಾಯಕ ಬಿ. ನಾಯ್ಕ ಮಾತನಾಡಿ, ದುಡಿಮೆಯ ಒಂದು ಪಾಲು ಸಾಮಾಜಿಕ ಕಾರ್ಯಕ್ಕಾಗಿ ವಿನಿಯೋಗಿಸುತ್ತಿದ್ದು, ಕಳೆದ 10 ವರ್ಷಗಳಿಂದ ಸಂಸ್ಥೆಯ ಮೂಲಕ ನೋಟ್‍ಬುಕ್ ,ಬ್ಯಾಗ್ ವಿತರಣೆ ಮಾಡಲಾಗಿದೆ. ಕಂಪ್ಯೂಟರ್ ತರಬೇತಿ,ಆರೋಗ್ಯ ಶಿಬಿರ ನಡೆಸಿದ್ದೇವೆ. ಕೊರೊನಾ ಲಾಕ್‍ಡೌನ್ ಸಮಯದಲ್ಲೂ ಸಹ ಸಂಸ್ಥೆ ಜನಪರ ಕಾರ್ಯ ಹಮ್ಮಿಕೊಂಡಿತ್ತು. ಈವರೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳಲ್ಲಿ ತೃಪ್ತಿ ಇದ್ದು, ಮುಂದಿನ ದಿನಗಳಲ್ಲೂ ಸಂಸ್ಥೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲಿದೆ ಎಂದರು.ನೀಡಿರುವಂತಹ ಪರಿಕರಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಪ್ರಜೆಗಳಾಗಿ ಹೊರಹೊಮ್ಮಿ. ನೀವು ಸಮಾಜಕ್ಕೆ ಕೊಡುವಂತರಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಅಡ್ಕಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಕೆಳಗಿನ ಮೂಡ್ಕಣಿ ಕಿರಿಯ ಪ್ರಾಥಮಿಕ ಶಾಲೆ,ತುಂಬೊಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ಒಟ್ಟು 92 ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಮ್.ಜಿ ನಾಯ್ಕ ಮಾತನಾಡಿ, ಇಂತಹ ಕಾರ್ಯಕ್ರಮಗಳು ಶಿಕ್ಷಣಕ್ಕೆ ನೀಡುವಂತಹ ಪ್ರೋತ್ಸಾಹವಾಗಿದೆ.ಇದು ಕಲಿಕೆಗೆ ಹೊಸ ಉತ್ತೇಜನ ನೀಡಲಿದೆ.ವಿನಾಯಕ ನಾಯ್ಕ ಅವರು ತಮ್ಮ ಸ್ವಂತ ಹಣದಲ್ಲಿ ಶಾಲಾಮಕ್ಕಳಿಗೆ ಪರಿಕರ ನೀಡುತ್ತಿರುವುದನ್ನು ಇಲಾಖೆಯ ಪರವಾಗಿ ಅಭಿನಂಧಿಸುತ್ತೇನೆ.ಇಂತಹ ವ್ಯಕ್ತಿಗಳು ಪ್ರತಿ ಊರಿನಲ್ಲಿಯು ಇರಬೇಕು. ಅವರಂತಯೇ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದರೆ ಮಾತ್ರ ಶಾಲೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಅಡ್ಕಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ಕಮಲಾಕರ ಅಂಬಿಗ, ಮಾಜಿ ಅಧ್ಯಕ್ಷ ರಾಜು ನಾಯ್ಕ, ಶಿಕ್ಷಕರಾದ ಎಂ.ಎಂ.ನಾಯ್ಕ, ಮಂಗಲಾ ಹೆಗಡೆ,ಮಂಗಲಾ ಅಣ್ಣಪ್ಪ ನಾಯ್ಕ,ಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಮ್ .ಟಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.