Slide
Slide
Slide
previous arrow
next arrow

ಪರಸರ ಸಂರಕ್ಷಣೆ ಜಾಗೃತಿ ಜನಸಾಮಾನ್ಯರಲ್ಲಿ ಹೆಚ್ಚಲಿ; ಸ್ವರ್ಣವಲ್ಲೀ ಶ್ರೀ

300x250 AD

ಪರಿಸರ ಹೋರಾಟಗಾರ ಅನಂತ ಅಶೀಸರಗೆ ಗೌರವ ನಾಗರಿಕ ಸನ್ಮಾನ | ಅಭಿನಂದನಾ ಗ್ರಂಥ ‘ವೃಕ್ಷಮಿತ್ರ’ ಲೋಕಾರ್ಪಣೆ

ಶಿರಸಿ: ಪ್ರಾಚೀನ ಭಾರತೀಯರು ಕಂಡುಕೊಂಡ ಉಪಾಯ ಹಾಗೂ ಅನುಸರಿಸಿದ ತತ್ವದಂತೆ ಪರಿಸರದ ಜೊತೆಯಲ್ಲಿ ಜನರ ಸದ್ಭಾವನೆ ಬೆಸೆಯುವಂತೆ ಮಾಡುವುದರಿಂದ ಪರಿಸರ ಸಂರಕ್ಷಣೆ ಸಾಧ್ಯ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.

ಅವರು ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಭಾನುವಾರ ವೃಕ್ಷಲಕ್ಷ ಆಂದೊಲನ ಸಂಘಟಿಸಿದ್ದ ಪರಿಸರ ಸಂರಕ್ಷಣೆ-ಸುಸ್ಥಿರ ಅಭಿವೃದ್ಧಿ ರಾಜ್ಯಮಟ್ಟದ ಸಮ್ಮೇಳನದಲ್ಲಿ ಪರಿಸರ ಹೋರಾಟಗಾರ ವೃಕ್ಷಲಕ್ಷ ಆಂದೋಲನದ ಪ್ರಮುಖ ಅನಂತ ಹೆಗಡೆ ಅಶೀಸರ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವದಿಸಿದರು.

ಅನಂತ ಅಶೀಸರ ಅವರು ಬೇಡ್ತಿ ಚಳುವಳಿಗೆ ಹೊಸ ದಿಕ್ಕು ನೀಡಿದ್ದಾರೆ. ಅವರ ನೇತೃತ್ವದಲ್ಲಿ ಹಲವು ಆಂದೋಲನ ನಡೆಯಿತು. ಅವರ ಪರಿಸರ ಹೋರಾಟದ ಹಾದಿ ಮುಂದಿನ ಪೀಳಿಗೆಗ ಪ್ರೇರಣೆಯಾಗಿದೆ ಎಂದು ಶ್ರೀಗಳು ಆಶಿಸಿದರು.

ಪರಿಸರ ರಕ್ಷಣೆಯಲ್ಲಿ ವಿಷಮತೆ ಬರದಂತೆ ನೋಡಿಕೊಳ್ಳಬೇಕಾದುದು ನಮ್ಮ ಕರ್ತವ್ಯ. ಇದಕ್ಕಾಗಿಯೇ ಪ್ರಾಚೀನರು ಪರಿಸರದ ಜೊತೆಗೆ ಜನರಲ್ಲಿ ಶ್ರದ್ಧಾ ಭಾವನೆ ಬೆಸೆದಿದ್ದರು ಹಾಗೂ ಬೆಳೆಸಿದ್ದರು. ಈ ಪಂಚಮಹಾಭೂತಗಳಿಗೆ ಧಾರ್ಮಿಕವಾಗಿ ಮಹತ್ವ ನೀಡಿ ಪರಿಸರದ ಬಗ್ಗೆ ಶ್ರದ್ಧಾ ಭಾವನೆ ಬೆಳೆಸಿದ್ದರು. ಜನಸಾಮಾನ್ಯತು ತಮ್ಮ ಜೀವನದಲ್ಲಿ ಪರಿಸರ ಪ್ರೀತಿಸುವಂತೆ ಮಾಡಿದ್ದರು. ಪರಿಸರ ಸಂರಕ್ಷಣೆಯ ಈ ಉಪಾಯ ಈಗಲೂ ಮುಂದುವರಿಯಬೇಕು ಹಾಗೂ ನಮ್ಮ ಜೀವನದಲ್ಲಿ ಇನ್ನಷ್ಟು ಗಾಢವಾಗಬೇಕು ಎಂದು ಹೇಳಿದರು.

ಈಗ ಪರಿಸರ ಹಾನಿಗೊಳಗಾಗುತ್ತಿದೆ. ಪ್ಲಾಸ್ಟಿಕ್ ಮತ್ತಿತರ ಕಾರಣದಿಂದ ಅದರ ಮೂಲ ಸತ್ವ ಗುಣ ಮಾಯವಾಗುತ್ತಿದೆ. ಜಲಮಾಲಿನ್ಯ, ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಪರಿಸರ ವೈಪರೀತ್ಯದಿಂದ ತಾಪಮಾನ ಹೆಚ್ಚುತ್ತಿದೆ. ಪರಿಸರ ಆರೋಗ್ಯ ಕೆಟ್ಟಿದ್ದರಿಂದಲೇ ವಿಪರೀತ ವರ್ತನೆಗಳು ಪ್ರಕೃತಿಯಲ್ಲಿ ಕಂಡುಬರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪಶ್ಚಿಮಘಟ್ಟ ಅಧ್ಯಯನ ಕೇಂದ್ರವಾಗಲಿ..
ಪಶ್ಚಿಮಘಟ್ಟಕ್ಕೆ ಗಂಗಾಧರ ಎನ್ನಲಾಗುತ್ತದೆ. ಎಲ್ಲ ನದಿಗಳ ಮೂಲ ಇಲ್ಲಿಯೇ ಇದೆ. ಆದರೆ ಪಶ್ಚಿಮಘಟ್ಟ ಅಧ್ಯಯನ ಮಾಡುವ ಯಾವ ಸಂಸ್ಥೆಯೂ ನಮ್ಮಲ್ಲಿ ಇಲ್ಲ. ಹೀಗಾಗಿ ಇದನ್ನು ಸಮಗ್ರವಾಗಿ ಅಧ್ಯಯನ ಮಾಡುವ ಕೇಂದ್ರ ಸ್ಥಾಪನೆಯಾಗಬೇಕು. ಪಶ್ಚಿಮಘಟ್ಟ ರಾಜ್ಯದಲ್ಲಿಯೇ ಹೆಚ್ಚಿನ ಪಾಲು ಹರಡಿಕೊಂಡಿದ್ದು ಪರಿಸರ ಸಂಬಂಧಿ ಕ್ರಿಯಾಶೀಲವಾಗಿರುವ ಶಿರಸಿಯಲ್ಲಿ ಈ ಕೇಂದ್ರ ಸ್ಥಾಪನೆಯಾಗಬೇಕು ಎಂದು ಪರಿಸರ ಅರ್ಥಶಾಸ್ತ್ರಜ್ಞ ಪ್ರೊ.ಬಿ.ಎಂ.ಕುಮಾರಸ್ವಾಮಿ ಒತ್ತಾಯಿಸಿದರು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪಶ್ಚಿಮ ಘಟ್ಟ ಹಾದುಹೋಗಿರುವ ದಕ್ಷಿಣ ಭಾರತ ರಾಜ್ಯಗಳನ್ನು ಸಹಕಾರ ಪಡೆದು ಈ ಕೇಂದ್ರ ಆರಂಭಿಸಲು ಮುಂಆಗಬೇಕು ಎಂದು ಅವರು ಒತ್ತಾಯಿಸಿದರು.

300x250 AD

ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ ಮಾತನಾಡಿ, ಪರಿಸರ ಸಂರಕ್ಷಣೆ ವಿಷಯವಾಗಿ ಯಾವುದೇ ರಾಜಕೀಯ ಪಕ್ಷಗಳು ಕೆಲಸ ಮಾಡಿಲ್ಲ. ತಾವು ಮಾಡುವ ಕೆಲಸದಿಂದ ಪರಿಸರ ಸಂರಕ್ಷಣೆಗೆ, ಹಸಿರು ಹೊದಿಕೆಗೆ ಶಾಶ್ವತ ಹಾನಿಯಾಗುತ್ತಿರುವ ಅರಿವು ಅವರಿಗಿಲ್ಲ. ಹೀಗಾಗಿ ಪ್ರಕೃತಿಯ ರಕ್ಷಣೆಗೆ ಜನಶಕ್ತಿಯೇ ಮುಂದೆ ಬರಬೇಕು ಎಂದರು.

ರಾಷ್ಟ್ರೀಯ ವೈದ್ಯಕೀಯ ಆಯೋಗ ಅಧ್ಯಕ್ಷ ಡಾ. ಬಿ. ಎನ್ ಗಂಗಾಧರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅನಂತ ಅಶೀಸರ ಅವರು ಪಶ್ಚಿಮಘಟ್ಟ ರಕ್ಷಣೆಗೆ ದಕ್ಷ ಪಡೆ ಕಟ್ಟಿ ಮಾದರಿಯಾಗಿದ್ದಾರೆ ಎಂದರು.
ಭಾರತೀಯ ಭಾಷಾ ಸಮಿತಿ ಅಧ್ಯಕ್ಷ ಡಾ.ಚಮೂ ಕೃಷ್ಣಶಾಸ್ತ್ರೀ ಮಾತನಾಡಿ, ಪ್ರಕೃತಿಯ ಸಂರಕ್ಷಣೆಯಲ್ಲಿ ಜ್ಞಾನಶಕ್ತಿ, ಕ್ರಿಯಾಶಕ್ತಿಯಷ್ಟೇ ಇದ್ದರೆ ಸಾಲದು ನಮ್ಮಲ್ಲಿ ಇಚ್ಛಾಶಕ್ತಿಯೂ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅನಂತ ಅಶೀಸರ ಕೆಲಸ ಮಾಡಿದ್ದಾರೆ ಎಂದರು. ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಮಾತನಾಡಿ, ಪರಿಸರ ಹೋರಾಟ ಕೆಲವರಿಗೆ ಫ್ಯಾಶನ್‌ ಆಗಿದೆ. ಆದರೆ ಅನಂತ ಅಶೀಸರ ಅವರು ಪರಿಸರದ ಬಗ್ಗೆ ನಿಜವಾದ ಕಳಕಳಿ ಹೊಂದಿದ್ದಾರೆ. ಇದರಿಂದ ಪ್ರೇರಣೆ ಪಡೆದು ಕಾರ್ಯಕರ್ತರು ಇದರಲ್ಲಿ ತೊಡಗಿಕೊಂಡಿದ್ದಾರೆ ಎಂದರು.

ಅಲ್ಲದೆ, ಅನಂತ ಹೆಗಡೆ ಅಶೀಸರ ಅವರ ಅಭಿನಂದನಾ ಗ್ರಂಥ ʼವೃಕ್ಷಮಿತ್ರʼ ವನ್ನು ಲೋಕಾರ್ಪಣೆ ಮಾಡಲಾಯಿತು. ಇದೇ ವೇಳೆ ಡಾ.ಪ್ರಕಾಶ ಮೇಸ್ತ ಅವರಿಗೆ ವೃಕ್ಷಲಕ್ಷ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಶಾರದಾಂಬಾ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ಮೊದಲಾದವರಿದ್ದರು.

ನಾರಾಯಣ ಗಡಿಕೈ ಸ್ವಾಗತಿಸಿದರು. ಶೈಲಜಾ ಗೋರ್ನಮನೆ ಹಾಗೂ ಮಧುಮತಿ ಬಕ್ಕೆಮನೆ ನಿರೂಪಿಸಿದರು. ವಿಶ್ವೇಶ್ವರ ಭಟ್ಟ ಕೋಟೆಮನೆ ವಂದಿಸಿದರು. ಡಾ.ಕೇಶವ ಎಚ್.ಕೊರ್ಸೆ ವಿವಿಧ ಜವಾಬ್ದಾರಿ ನಿರ್ವಹಿಸಿದರು. ನಂತರ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತ ಗೋಷ್ಠಿಯಲ್ಲಿ ಪರಿಸರ ತಜ್ಞ ನಾಗೇಶ ಹೆಗಡೆ, ಡಾ. ಟಿ.ವಿ. ರಾಮಚಂದ್ರ, ಶಿವಾನಂದ ಕಳವೆ, ವಾಸುದೇವ ಮೊದಲಾದವರು ವಿಷಯ ಮಂಡಿಸಿದರು.

Share This
300x250 AD
300x250 AD
300x250 AD
Back to top