ಕಾಲಚಕ್ರ ನಾಟಕಕ್ಕೆ ಜನರಿಂದ ಭರಪೂರ ಮೆಚ್ಚುಗೆ | ಕ್ಯಾನ್ಸರ್ ರೋಗಿಗಳ ಸಹಾಯಾರ್ಥ ಪ್ರಜ್ವಲ ಟ್ರಸ್ಟ್ ಆಯೋಜನೆ
ಶಿರಸಿ: ಇಲ್ಲಿನ ಪ್ರಜ್ವಲ್ ಟ್ರಸ್ಟ್‌ವತಿಯಿಂದ ಕ್ಯಾನ್ಸರ್ ರೋಗಿಗಳ ಸಹಾಯಾರ್ಥವಾಗಿ ಮಂಚಿಕೇರಿ ರಂಗ ಸಮೂಹದವರಿಂದ “ಕಾಲಚಕ್ರ” ವಿಶೇಷ ಸಾಮಾಜಿಕ ನಾಟಕ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಅಪ್ಪ-ಅಮ್ಮನನ್ನು ವೃದ್ದಾಪ್ಯದಲ್ಲಿ ನೋಡಿಕೊಳ್ಳದ ಮಕ್ಕಳು ಹಾಗೂ ಪಾಲಕರ ತಳಮಳ, ಇನ್ನೊಂದು ಕುಟುಂಬ ಅವರ ದತ್ತಕ ಪಡೆದು ಅಪ್ಪ ಅಮ್ಮನನ್ನಾಗಿ ಕಾಣುವ ದೃಶ್ಯಗಳ ಸುತ್ತ ಹೆಣೆಯಲಾದ ಎರಡುಕಾಲು ತಾಸಿನ ನಾಟಕ ಗಮನ ಸೆಳೆಯಿತು.
ನಗರದ ಟಿಆರ್‌ಸಿ ಸಭಾಭವನದಲ್ಲಿ ನಡೆದ ನಾಟಕ ಪ್ರದರ್ಶನಕ್ಕೆ ಅನಂತಮೂರ್ತಿ ಹೆಗಡೆ ಚ್ಯಾರಿಟೇಬಲ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಉದ್ಘಾಟಿಸಿ, ಉತ್ತರ ಕನ್ನಡದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಳ ಆಗುತ್ತಿದೆ. ಜಿಲ್ಲೆಯಲ್ಲಿ ಒಂದೇ ಒಂದು ಕ್ಯಾನ್ಸರ್ ಆಸ್ಪತ್ರೆ ಇಲ್ಲ. ಯಾರೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದರು.
ಕ್ಯಾನ್ಸರ್ ರೋಗಿಗಳ ಸಮಾಲೋಚಕಿ, ಪತ್ರಕರ್ತೆ ಕೃಷ್ಣಿ ಶಿರೂರು, ಕ್ಯಾನ್ಸರ್ ಹೆಚ್ಚಳ ಆಗುತ್ತಿದೆ. ಒತ್ತಡದ ಜೀವನ, ಆಹಾರ ಪದ್ಧತಿ ಕಾರಣ ಆಗಿರಬಹುದು. ಕ್ಯಾನ್ಸರ್ ಧೈರ್ಯವಾಗಿ ಎದುರಿಸಬೇಕು. ಕ್ಯಾನ್ಸರ್ ಯಾವುದೇ ಹಂತದಲ್ಲಿ ಇದ್ದರೂ ಗಾಯತ್ರಿಮುದ್ರೆ, ಯೋಗಾಸನ, ಪ್ರಾಣಾಯಾಮಗಳಿಂದ ಗೆಲ್ಲಲು ಸಾಧ್ಯ. ಮಧುಮೇಹ, ಬಿಪಿಯಂತೆ ಸ್ವೀಕರಿಸಬೇಕು ಎಂದೂ ಸಲಹೆ ಮಾಡಿದರು.
ಪ್ರಜ್ವಲ್ ಟ್ರಸ್ಟ್ ನಡೆಸಿಕೊಟ್ಟ ಕ್ಯಾನ್ಸರ್ ಭಯನಿವಾರಣಾ ಕಾರ್ಯಾಗಾರದ ಪ್ರಯೋಜನ ಪಡೆದು ಗುಣಮುಖರಾಗುತ್ತಿರುವ ಮಮತಾ ಭಟ್ಟ ಹುಲದೇವನಸರ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ರಂಗಕರ್ಮಿ ರಾಮಕೃಷ್ಣ ಭಟ್ಟ ಧುಂಡಿ ಉಪಸ್ಥಿತರಿದ್ದರು. ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ಮೂಲ ಮರಾಠಿ ಜಯವಂತ ದಳ್ವಿ, ಕನ್ನಡ ಅನುವಾದ ಎಚ್.ಕೆ.ಕರ್ಕೇರಾ, ಹುಲಗಪ್ಪ ಕಟ್ಟೀಮನಿ ನಿರ್ದೇಶನ, ಸಾಲಿಯಾನ್ ಉಮೇಶ ನಾರಾಯಣ ಸಹ ನಿರ್ದೇಶನದಲ್ಲಿ ರಂಗಸಮೂಹದ ಸಂಚಾಲಕ ರಾಮಕೃಷ್ಣ ಭಟ್ಟ ದುಂಡಿ ನೇತೃತ್ವದಲ್ಲಿ ಪ್ರದರ್ಶನ ಕಂಡಿತು. ಕಲಾವಿದರಾದ ನಾಗರಾಜ ಹೆಗಡೆ ಜಾಲಿಮನೆ, ವಿ.ಎನ್.ಶಾಸ್ತ್ರೀ, ಕಿರಣ ಹೆಗಡೆ ಕಾನಗೋಡ, ಸುಭೋದ ಹೆಗಡೆ, ಪ್ರಕಾಶ ಭಟ್ಟ, ಎಂ.ಕೆ.ಭಟ್ಟ, ವಿಕಾಸ ನಾಯ್ಕ, ಕೃಷ್ಣಮೂರ್ತಿ ಶಾಸ್ತ್ರಿ, ಸಾಗರ ಹೆಗಡೆ, ನಿರ್ಮಲಾ ಗೋಳಿಕೊಪ್ಪ, ಅಮೃತಾ ಪೂಜಾರಿ, ರಕ್ಷಿತಾ ಹೂಗಾರ ನಮ್ಮ ನಡುವಿನ ಕಥೆಗಳಿಗೆ ಪಾತ್ರವಾದರು. ಕಿರಣ ಹೆಗಡೆ ಮತ್ತು ಪ್ರಕಾಶ ಭಟ್ಟ ಸಂಗೀತದಲ್ಲಿ ಸಾಥ್ ನೀಡಲಿದ್ದು, ಎಂ.ಕೆ.ಭಟ್ಟ ಮತ್ತು ವಿ.ಎನ್.ಶಾಸ್ತ್ರೀ ಧ್ವನಿ ಮತ್ತು ಬೆಳಕು ವ್ಯವಸ್ಥೆ ಮಾಡಿದರು. ಈ ವೇಳೆ ರಾಘವೇಂದ್ರ ಹೆಗಡೆ, ರಮೇಶ ಕಂಚೀಕೈ, ನಯನಾ ಹೆಗಡೆ, ಸುಮಾ ಹೆಗಡೆ, ದತ್ತಾತ್ರೇಯ ಹೆಗಡೆ, ರವಿ ಮೂರೂರು, ಸ್ನೇಹಶ್ರೀ ಹೆಗಡೆ, ಸತೀಶ ಗೋಳಿಕೊಪ್ಪ, ವೆಂಕಟೇಶ ಹೆಗಡೆ ಬೆಂಗಳೆ ಮತ್ತಿತರರು ಸಹಕಾರ ನೀಡಿದರು. ಮಾನ್ಯ ಹೆಗಡೆ ಪ್ರಾರ್ಥನೆ ಹಾಡಿದರು.
ಸತೀಶ ಹೆಗಡೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಇದೇ ವೇಳೆ ಸಂಘಟಕಿ ಬಿಂದು ಹೆಗಡೆ ಅವರನ್ನು ಅನಂತಮೂರ್ತಿ ಹೆಗಡೆ ಅವರು ಸಮ್ಮಾನಿಸಿದರು.