ಹೊನ್ನಾವರ: ತಾಲೂಕಿನ ಬಂಗಾರಮಕ್ಕಿತ ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್ & ಪಿ. ಯು. ಕಾಲೇಜ್‌ನಲ್ಲಿ ೧೦ನೇ ಅಂತರಾಷ್ಟ್ರೀಯ ಯೋಗ ದಿನವನ್ನು ‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂಬ ಧ್ಯೇಯ ವಾಕ್ಯ ದೊಂದಿಗೆ ಆಚರಿಸಲಾಯಿತು.
ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಕ್ಷೇತ್ರದ ಧರ್ಮಾಧಿಕಾರಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರು ವಹಿಸಿದ್ದು, ಸಂಸ್ಥೆಯ ಆಡಳಿತಾಧಿಕಾರಿಗಳಾದ ಮಂಜುನಾಥ ಎಮ್. ಎನ್, ಶಾಲೆಯ ಆಡಳಿತ ನಿರ್ದೇಶಕ ಜಿ. ಟಿ. ಹೆಗಡೆ, ಶಾಲೆಯ ಪ್ರಾಂಶುಪಾಲರಾದ ಎಸ್.ಜೊನ್ ಬೊಸ್ಕೊ ಉಪಸ್ಥಿತರಿದ್ದರು. ದೀಪ ಪ್ರಜ್ವಲನೆಯ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು.
ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಯೋಗ ಪ್ರದರ್ಶನ ನೀಡಿದರು, ಇದೇ ಸಂದರ್ಭದಲ್ಲಿ ವಿವಿಧ ಯೋಗಾಸನಗಳು ಹಾಗೂ ಅವುಗಳ ಮಹತ್ವವನ್ನು ಪರಿಚಯಿಸಲಾಯಿತು.
ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರು ‘ಇಡೀ ವಿಶ್ವಕ್ಕೆ ಭಾರತದ ಅಮೂಲ್ಯ ಕೊಡುಗೆ ಯೋಗ. ಯೋಗ ಎಂದರೆ ಸೇರಿಸು / ಕೂಡಿಸು ಎಂದರ್ಥ. ದೇಹ ಮತ್ತು ಮನಸ್ಸನ್ನು ಕೂಡಿಸುವ ಕೊಂಡಿ ಯೋಗ. ಮನಸ್ಸಿನ ಚಿತ್ತ ಚಾಂಚಲ್ಯವನ್ನು ನಿಗ್ರಹ ಮಾಡುವ ಅತ್ಯಮೂಲ್ಯ ಸಾಧನ ಈ ಯೋಗ. ವೇದಗಳಲ್ಲಿ ಯೋಗದ ಮಹತ್ವವನ್ನು ವಿವರಿಸುತ್ತಾ ನಿತ್ಯ ಪಠಣ ಮಾಡುವ ಮಂತ್ರೋಚ್ಛಾರಗಳಲ್ಲಿ ಕ್ಷಣ ಕ್ಷಣದ ಉಸಿರಾಟದ ಅನುಲೋಮ, ವಿಲೋಮ, ಸ್ತಂಭನದ ಪ್ರಕ್ರಿಯೆಗಳಲ್ಲಿ ಹಾಸುಹೊಕ್ಕಾಗಿದೆ. ಯೋಗ ಮನುಷ್ಯನ ಆರೋಗ್ಯವನ್ನು ಸುಸ್ಥಿರವಾಗಿಡುವಲ್ಲಿ ಸಹಕಾರಿ. ಯೋಗದ ನಿತ್ಯ ಅನುಷ್ಠಾನವೇ ಮಹಾಯಜ್ಞ. ಇದರಿಂದ ಆರೋಗ್ಯ ಹಾಗೂ ಆಧ್ಯಾತ್ಮಿಕ ಜಾಗೃತಿ ಸಾಧ್ಯ. ಯೋಗದಿಂದ ಚಿತ್ತದ ಶುದ್ಧಿ ಹಾಗೂ ಜ್ಞಾನದ ವೃದ್ಧಿ ಸಾಧ್ಯ’ ಎಂದು ತಿಳಿಸುತ್ತಾ ಸರ್ವರಿಗೂ ಶುಭಾಶೀರ್ವದಿಸಿದರು. ಸಮಾರಂಭದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಪೋಷಕವೃಂದ, ಕ್ಷೇತ್ರದ ಭಕ್ತವೃಂದ ಹಾಗೂ ಎಲ್ಲಾ ಸಿಬ್ಬಂದಿವರ್ಗದವರು ಹಾಜರಿದ್ದು ಕಾರ್ಯಕ್ರಮದ ಮೆರುಗನ್ನು ಇಮ್ಮಡಿಯಾಗಿಸಿದರು.