ಬನವಾಸಿ: ರಾಜ್ಯದಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರ ಪಾಲಿಗೆ ವರವಾಗಿದೆ ಎಂದು ಡಬ್ಲ್ಯೂಎಚ್ಆರ್ ಆರ್ಕೆ ಫೌಂಡೇಶನ್ ನ ಬನವಾಸಿ ಮುಂಡಗೋಡ ಘಟಕದ ಮಹಿಳಾ ಅಧ್ಯಕ್ಷೆ ಸೀಮಾ ಕೆರೊಡಿ ಹೇಳಿದರು.
ಅವರು ಸಮೀಪದ ಕೊರ್ಲಕಟ್ಟ ಗ್ರಾಮದ ಸಮುದಾಯ ಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಹಾಸತಿ ಮಹಿಳಾ ಜ್ಞಾನ ವಿಕಾಸ ಕೇಂದ್ರ ಮಂಗಳವಾರ ಹಮ್ಮಿಕೊಂಡ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡಲು ಸಾಲ ಸೌಲಭ್ಯ ನೀಡುವುದರ ಜೊತೆಗೆ ಸಮಾಜದ ಬಗ್ಗೆ ಕಾಳಜಿಯನ್ನು ಹೊಂದಿ ಕೃಷಿ ತರಬೇತಿ, ಪರಿಕರಗಳ ವಿತರಣೆ, ವಿದ್ಯಾರ್ಥಿ ವೇತನ, ಮದ್ಯಪಾನ ವರ್ಜನ ಶಿಬಿರ, ಪರಿಸರ ಕಾಳಜಿ, ಬೀಜ ಬಿತ್ತನೆ, ಬಡವರು ವಾಹನ ಖರೀದಿಸಲು ಸಾಲ ಸೌಲಭ್ಯ, ಅಂಗವಿಕಲರಿಗೆ ತ್ರಿಚಕ್ರ ವಾಹನಗಳ ವಿತರಣೆ ಹೀಗೇ ಹತ್ತು ಹಲವು ಜನಪರ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಾ ಗ್ರಾಮೀಣ ಪ್ರದೇಶದ ಜನರಿಗೆ ಗ್ರಾಮಾಭಿವೃದ್ದಿ ಯೋಜನೆ ಸಂಜೀವಿನಿಯಾಗಿದೆ ಎಂದರು.
ಯೋಜನಾಧಿಕಾರಿ ರಾಘವೇಂದ್ರ ನಾಯ್ಕ್ ಮಾತನಾಡಿ,ಮಹಿಳೆಯರ ತಮ್ಮ ಕುಟುಂಬದಲ್ಲಿ ಸ್ವಂತ ನಿರ್ಧಾರ ತಳೆಯುವ ಶಕ್ತಿ ನೀಡುವ ಉದ್ದೇಶದಿಂದ ಜ್ಞಾನವಿಕಾಸ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ 1982ರಲ್ಲಿ ಆರಂಭವಾಗಿ ದೇವಾಲಯದ ವತಿಯಿಂದ ನಡೆಯುತ್ತಿರುವ ಸಂಸ್ಥೆಯಾಗಿದ್ದು. ಇಂದು ರಾಜ್ಯಾದ್ಯಂತ ತನ್ನ ಸಾವಿರಾರು ಶಾಖೆಗಳನ್ನು ಹೊಂದಿದೆ. ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಹೇಮಾವತಿ ಹೆಗ್ಗಡೆಯವರ ಆಶಯದಂತೆ ಮಹಿಳೆಯರ ಆರ್ಥಿಕ, ಬೌದ್ಧಿಕ, ಸಾಮಾಜಿಕ ಬಡತನಗಳನ್ನು ದೂರಮಾಡುವ ದೃಷ್ಟಿಯಿಂದ ಜ್ಞಾನ ವಿಕಾಸ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಮಹಿಳೆಯರಿಗೆ ಸಂಘಟನೆಯ ಮೂಲಕ ಶಿಕ್ಷ ಣ, ಆರ್ಥಿಕ ನೆರವು ನೀಡಿ ನಿರಂತರ ಬದಲಾವಣೆಗೆ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಯಶ್ರೀ ಹೆಗಡೆ ಮಾತನಾಡಿ,ಸ್ತ್ರೀಶಕ್ತಿ ಸಬಲೀಕರಣದ ಉದ್ದೇಶದಿಂದ ಪ್ರತಿಗ್ರಾಮದಲ್ಲಿ ಜ್ಞಾನವಿಕಾಸ ಕೇಂದ್ರವನ್ನು ಆರಂಭಿಸಿ ಈ ಕೇಂದ್ರದ ಮೂಲಕ ಮಹಿಳೆಯರಿಗೆ ಆರೋಗ್ಯ, ಸ್ವಚ್ಛತೆ, ಶಿಕ್ಷ ಣ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಪರಿಣಿತರಿಂದ ಉಪನ್ಯಾಸ ಮತ್ತಿತರ ಚಟುವಟಿಕೆಗಳನ್ನು ನಡೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಅಧ್ಯಕ್ಷತೆವಹಿಸಿದ್ದ ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷೆ ಗುತ್ಯಮ್ಮ, ಗ್ರಾಪಂ ಕಾರ್ಯದರ್ಶಿ ಈರಪ್ಪ ಚನ್ನಯ್ಯ ಮಾತನಾಡಿದರು.ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯೆ ಮಂಜುಳ ಕಬ್ಬೆರ, ಮಂಜುನಾಥ ತಳವಾರ, ಡಬ್ಲ್ಯೂಎಚ್ಆರ್ ಆರ್ಕೆ ಫೌಂಡೇಶನ್ ಬನವಾಸಿ ಮುಂಡಗೋಡು ಅಧ್ಯಕ್ಷ ಸುಧೀರ ನಾಯರ್, ಸಮನ್ವಯ ಅಧಿಕಾರಿ ಮಲ್ಲಿಕಾ, ಅಲೋಕ್ ಕೆರೊಡಿ, ಹಾಗು ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸರ್ವ ಸದಸ್ಯರು ಇದ್ದರು.
ಕಾರ್ಯಕ್ರಮವನ್ನು ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ಮಲ್ಲಿಕಾ ನಿರೂಪಿಸಿದರು. ಗಂಗಾ ಆಚಾರಿ ಸ್ವಾಗತಿಸಿದರು. ಅಮೀನಾ ವಂದಿಸಿದರು.