ಭಟ್ಕಳ: ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಹಿರಿಯ ಕಾರ್ಯಕರ್ತ ದಿ. ಸಚಿನ ಮಹಾಲೆಯವರಿಗೆ ಭಟ್ಕಳ ಬಿಜೆಪಿ ಮಂಡಲವತಿಯಿಂದ ಇಲ್ಲಿನ ಮಣ್ಕುಳಿಯ ಬಿಜೆಪಿ ಕಾರ್ಯಾಲಯದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ ಬಾಲ್ಯ ಜೀವನದಿಂದ ಸಚಿನ ಮಹಾಲೆ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಭಟ್ಕಳ ಬಿಜೆಪಿ ಮಂಡಲಕ್ಕೆ ಇವರ ಸೇವೆ ಅನನ್ಯವಾಗಿದೆ. ಭಟ್ಕಳದಲ್ಲಿ ಯಾವುದೇ ಚುನಾವಣೆ ಬಂದರೂ ಸಹ ನಾನು ನಿಮ್ಮ ಜೊತೆಯಲ್ಲಿದ್ದೇನೆ ಎಂದು ಮುಂದೆ ಬಂದು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದರು. ತಮ್ಮ ಊರಿನಲ್ಲಿ ಯಾವುದೇ ರಾಜಕೀಯ ಅಥವಾ ಧಾರ್ಮಿಕ ಕಾರ್ಯಕ್ರಮವಾಗಲಿ ಅದಕ್ಕೆ ಬರುವಂತೆ ಕರೆ ಮಾಡಿ ತಿಳಿಸುತ್ತಿದ್ದ ಪ್ರಥಮ ವ್ಯಕ್ತಿ ಎಂದರೆ ಅದು ಸಚಿನ್ ಮಹಾಲೆ ಆಗಿದ್ದರು. ನಂತರ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ನಮ್ಮನ್ನು ಗೌರವಿಸುವ ಕೆಲಸ ಕೂಡ ಮಾಡುತ್ತಿದ್ದರು. ಆದರೆ ಈಗ ಅವರ ನಮ್ಮೆಲ್ಲರನ್ನು ಬಿಟ್ಟು ಅಗಲಿ ಹೋಗಿದ್ದಾರೆ. 2018 ಚುನಾವಣೆ ವೇಳೆ ಪ್ರಾಮಾಣಿಕವಾಗಿ ಸಂಪೂರ್ಣ ಲೆಕ್ಕಾಚಾರದ ಕೆಲಸವನ್ನು ಒಂದು ರೂಪಾಯಿ ತೆಗೆದುಕೊಳ್ಳದೆ ಮಾಡಿದ್ದಾರೆ. ಅದೇ ರೀತಿ ಅವರ ಪತ್ನಿ ಕೂಡ ಬಿಜೆಪಿ ಮಹಿಳಾ ಮಂಡಲದ ಸದಸ್ಯರಾಗಿದ್ದು ಅವರು ಕೂಡ ಚುನಾವಣೆ ವೇಳೆ ಪಕ್ಷದ ಗೆಲುವಿಗೆ ಬಹಳಷ್ಟು ಶ್ರಮ ವಹಿಸಿದ್ದಾರೆ ಎಂದ ಅವರು ಸಚಿನ್ ಮಹಾಳೆಯವರ ಕುಟುಂಬಕ್ಕೆ ಭಟ್ಕಳ ಬಿಜೆಪಿ ಮಂಡಲದಿಂದ ನೇರವಾಗಿ ನಮ್ಮ ಕೈಲಾಗುವಷ್ಟು ಸೇವೆ ಸಲ್ಲಿಸೋಣ ಎಂದರು.
ನಂತರ ಭಟ್ಕಳ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷರಾದ ಸುಬ್ರಾಯ ದೇವಾಡಿಗ ಮಾತನಾಡಿ ಕಳೆದ 35 ವರ್ಷದಿಂದ ಒಂದೇ ಪಕ್ಷದಲ್ಲಿದ್ದ ಬಿಜೆಪಿಯ ಹಿರಿಯ ಕಾರ್ಯಕರ್ತ ಸಚಿನ್ ಮಹಾಲೆ ಕಳೆದ 12 ದಿನಗಳಿಂದ ಅನಾರೋಗ್ಯದ ಹಿನ್ನೆಲೆಯಲ್ಲಿ ಶಿವಮೊಗ್ಗ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ದುರಾದೃಷ್ಟ ನಾವು ಯಾರೂ ಅವರ ಆರೋಗ್ಯ ವಿಚಾರಿಸಲು ಹೋಗಲು ಸಾಧ್ಯವಾಗಿಲ್ಲ. ಇದಕ್ಕೆ ಏನೇ ಕಾರಣ ಕೊಡಬಹುದು. ನಮ್ಮೊಂದಿಗೆ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿದ ಕಾರ್ಯಕರ್ತನನ್ನು ನಾವು ನೋಡಲು ಹೋಗದೆ ಇರುವುದು ನಮ್ಮಿಂದಲೇ ತಪ್ಪಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಕಾರ್ಯಕರ್ತರು ಕಷ್ಟದಲ್ಲಿರುವ ವೇಳೆ ಇಷ್ಟು ಮಾಡದೆ ಹೋದರೆ ನಾವು ಕಾರ್ಯಕರ್ತರಿಗೆ ಏನು ಮಾಡಲು ಸಾಧ್ಯ. ಒಬ್ಬ ಸಾಮಾನ್ಯ ಕಾರ್ಯಕರ್ತ ಸಾವನ್ನಪ್ಪಿದ್ದಾಗ ಅವರಿಗೆ ಸಾಂತ್ವಾನ ಹೇಳಲು ಸಾಧ್ಯವಾಗುತ್ತಿಲ್ಲ. ಈಗ ಸಚಿನ್ ಮಹಾಲೆ, ನಾಳೆ ನಾವು. ಇದು ಬದಲಾವಣೆಯಾಗಬೇಕು ಎಂದರು.
ಯಾರೇ ಬಿಜೆಪಿ ಕಾರ್ಯಕರ್ತರು ಸಾವನಪ್ಪಿದ ವೇಳೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಫೋಟೋ ಫ್ರೇಮ್ ಹಾಕಿ ತರುವಂತೆ ಹೇಳಿದರೆ ಯಾವುದೇ ಹಣ ಪಡೆದುಕೊಳ್ಳದೆ ಕೆಲಸ ಮಾಡುತ್ತಿದ್ದ. ಆದರೆ ಆತನ ಶ್ರದ್ಧಾಂಜಲಿ ಮಾಡುವ ಸಮಯ ಈಗ ಬಂದಿರುವುದು ನಮಗೆ ದುರಂತ. ಆ ಕುಟುಂಬಕ್ಕೆ ಪಕ್ಷದವರು ನಾವಿದ್ದೇವೆ ಎನ್ನುವ ಕಾಲ ಈಗ ಬಂದಿದ್ದು. ಯಾವುದೇ ರೀತಿಯಲ್ಲಾದರು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಾದ ನಾವೆಲ್ಲ ಸೇರಿ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಏಕೆಂದರೆ ಪಕ್ಷ ಬಲಿಷ್ಠವಾದಂತೆ ನಾಯಕರು ಕೂಡ ಬಲಿಷ್ಠರಾಗುತ್ತಾರೆ. ಆದರೆ ಕಾರ್ಯಕರ್ತ ಮಾತ್ರ ಮೊದಲಿನಂತೆ ಕುಗ್ಗುತ್ತಿರುತ್ತಾನೆ. ಈ ರೀತಿಯಾದರೆ ಮುಂದಿನ ದಿನಗಲ್ಲಿ ಪಕ್ಷಕ್ಕೆ ಕೆಲಸ ಮಾಡಲು ಯಾವ ಕಾರ್ಯಕರ್ತನು ಇಲ್ಲದಿರುವ ಪರಿಸ್ಥಿತಿ ಬರುತ್ತದೆ. ಏನೋ ಒಂದು ಪಕ್ಷದ ಬಗ್ಗೆ ಹುಚ್ಚು , ಹಿಂದುತ್ವವನ್ನು ತಲೆಯಲ್ಲಿಟ್ಟುಕೊಂಡು ಯಾವ ನಾಯಕರು ಏನೇ ಮಾಡಲಿ ನನಗೆ ಪಕ್ಷ ಮುಖ್ಯ ಎಂದು ಹೇಳಿಕೊಂಡು ಓಡಾಡುವ ಕಾರ್ಯಕರ್ತರು ಇರುವುದರಿಂದ ನಮ್ಮ ಪಕ್ಷ ಇಲ್ಲಿಯ ತನಕ ಜೀವಂತವಾಗಿದೆ. ಬೇರೆ ಪಕ್ಷದಲ್ಲಿ ಇರುವಂತೆ ನಾಯಕರು ಬಂದರೆ ಮಾತ್ರ ಅವರ ಒಟ್ಟಿಗೆ ಹೋಗುತ್ತೇನೆ. ಅವರ ಜೇಬಿನಿಂದ ಹಣ ಖರ್ಚು ಮಾಡಿದರೆ ಮಾತ್ರ ಕೆಲಸ ಮಾಡುತ್ತೇನೆ ಎನ್ನುವ ಕಾರ್ಯಕರ್ತರು ನಮ್ಮ ಕಾರ್ಯಕರ್ತರಾಗಿದ್ದರೆ ನಮ್ಮ ಪಕ್ಷ ಈ ಮಟ್ಟಿಗೆ ಬೆಳೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ನಂತರ ಬಿಜೆಪಿ ಹಿರಿಯ ಮುಖಂಡ ಗೋವಿಂದ ನಾಯ್ಕ ಮಾತನಾಡಿ 1993 ರಲ್ಲಿ ಒಂದು ಸಣ್ಣ ದುರಂತವಾದರು ಸಹ ಕಾರ್ಯಾಕರ್ತರ ಮನೆಗೆ ತಂಡೋಪತಂಡವಾಗಿ ಭೇಟಿ ನೀಡುವ ವ್ಯವಸ್ಥೆ ಇತ್ತು. ಆದರೆ ಈಗ ಅದನ್ನು ನಾವು ಎಲ್ಲೋ ಮರೆತ್ತಿದ್ದೇವೆ ಎಂದು ಅನಿಸುತ್ತಿದೆ. ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಬಳಲುತ್ತಿರಬೇಕಾದರೆ ನಮ್ಮಿಂದ ಏನು ಮಾಡಲು ಸಾಧ್ಯವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಾವು ಆಸ್ಪತ್ರೆಗೆ ತೆರಳಿ ಸಾಂತ್ವನ ಹೇಳುವ ಕೆಲಸ ಮಾಡಬೇಕಿತ್ತು. ಆದರೆ ನಮ್ಮಿಂದ ಆಗಿಲ್ಲ ಅದು ಬಹಳ ದುಃಖದ ಸಂಗತಿಯಾಗಿದ್ದು, ನಮಗೆ ತುಂಬಾ ನೋವಾಗಿದೆ ಎಂದ ಅವರು ನಾವೆಲ್ಲ ಸಚಿನ ಮಹಾಲೆ ಚೇತರಿಸಿಕೊಂಡು ಬರುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದೆವು. ಯಾವ ಕಾರ್ಯಕರ್ತರು ಕಷ್ಟದಲ್ಲಿರುವ ವೇಳೆ ಅವರಿಗೆ ಆರ್ಥಿಕ ಸಹಾಯಗಿಂತ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಹಿತವಚನ ಹೇಳುವ ಒಂದು ಕಾರ್ಯಕರ್ತರ ತಂಡವಾಗಬೇಕು ಎಂದರು.
ಸಚಿನ ಮಹಾಲೆ ಚಿಕ್ಕವರಿದ್ದಾಗಲೆ ತಂದೆ ತಾಯಿಯನ್ನು ಕಳೆದುಕೊಂಡು ಅವರ ಸಹೋದರಾದ ವಿವೇಕ ಮಹಾಲೆಯೊಂದಿಗೆ ಸೇರಿ ಚಿಕ್ಕವರಿದ್ದಗಲೇ ಕಷ್ಟವನ್ನು ಅನುಭವಿಸಿ ಜವಾಬ್ದಾರಿ ನಿರ್ವಹಿಸಿಕೊಂಡು ಬಂದಿದ್ದರು. ಯಾರ ಮುಂದೆಯೂ ಕೈ ಚಾಚದೆ ಸ್ವಾಭಿಮಾನದಿಂದ ಬದುಕಿಕೊಂಡು ಬಂದಿರುವ ಕುಟುಂಬ. ಆದರೆ ಸಚಿನ ಮಹಾಲೆ ಅನಾರೋಗ್ಯಕ್ಕೆ ಒಳಗಾದಾಗ ಅವನ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಅವರ ಸಹೋದರ ವಿವೇಕ್ ಮಹಾಲೆ ಭರಿಸಿದ್ದಾರೆ. ಹಾಗಾಗಿ ನಾವೆಲ್ಲ ಏನು ಮಾಡಬೇಕು ಎಂದು ಚಿಂತನೆ ಮಾಡಿ. ನಮ್ಮಿಂದಾಗುವ ಸಹಾಯ ಮಾಡಿ ಅವರ ಕುಟುಂಬಕ್ಕೆ ಅಸರೆಯಾಗೋಣ ಎಂದು ಬಿಜೆಪಿ ಮಂಡಲ ಅಧ್ಯಕ್ಷರಿಗೆ ಸೂಚನೆ ನೀಡಿದರು. ನಾವು ನಿರಂತರವಾಗಿ ಕಾರ್ಯಕರ್ತರ ಸಂಪರ್ಕದಲ್ಲಿರಬೇಕು ಮತ್ತು ಯಾವುದೇ ಸಣ್ಣ ಘಟನೆಯಾದರು ಸಹ ಕಾರ್ಯಕರ್ತರ ಮನೆಗೆ ಭೇಟಿ ಸಾಂತ್ವನ ಹೇಳುವ ಕೆಲಸ ನಮ್ಮೆಲ್ಲರಿಂದ ಆಗಬೇಕು ಎಂದರು.
ನಾವು ಅಧಿಕಾರಕ್ಕೆ ಬಂದಾಗ ಸಮಾಜಕ್ಕೆ ಏನಾದರೂ ಒಂದು ಕಿಂಚಿತ್ತೂ ವಿನಿಯೋಗ ಮಾಡಿ ಇಡಬೇಕು. ಭಟ್ಕಳದಲ್ಲಿ ಮುಂದಿನ ದಿನಗಳಲ್ಲಿ ಕಾರ್ಯಕರ್ತರಿಗೆ ಯಾವುದೇ ರೀತಿ ಗಂಡಾಂತರ ಬರಬಹುದು. ಇದಕ್ಕಾಗಿ ಬಿಜೆಪಿ ಮಂಡಲ ನೇತೃತ್ವದಲ್ಲಿ ವಿವಿಧ ಹಿಂದೂ ಸಂಘಟನೆ ಸೇರಿ ಮೂಲಭೂತ ಸೌಕರ್ಯ ಏನು ಬೇಕು ಎಂದು ನಾವೆಲ್ಲ ಕೂತು ಯೋಚನೆ ಮಾಡಬೇಕು. ಹಾಗೆ ಆರ್ಥಿಕವಾಗಿ ಸದ್ರಢವಾಗದೆ ಇದ್ದರೆ ಅದರ ಅರಿವು ಮುಂದಿನ ದಿನಗಳೇ ಗೊತ್ತಾಗುತ್ತದೆ. ಅದಕ್ಕಾಗಿ ಉಳ್ಳವರೆಲ್ಲ ಸೇರಿ ಕಾರ್ಯಕರ್ತರ ಸಹಾಯಕ್ಕೆ ಮುಂದಾಗುವ ಯೋಚನೆ ಮಾಡಬೇಕು ಎಂದರು.
ನಂತರ ಈಶ್ವರ ನಾಯ್ಕ ಮಾತನಾಡಿ ಸಚಿನ ಮಹಾಲೆ ಕೋವಿಡ್ ಸಮಯದಲ್ಲಿ ತಮ್ಮ ಮನೆಯಲ್ಲಿ ಕಷ್ಟವಿದ್ದರು ಸಹ. ನನ್ನ ಬಳಿ, ಕೃಷ್ಣ ನಾಯ್ಕ ಹಾಗೂ ಸುನೀಲ ನಾಯ್ಕರಿಂದ ದಿನಸಿ ಪಡೆದು ಬಡವರ ಮನೆ ಪಟ್ಟಿ ತಯಾರಿಸಿ ಅವರ ಮನೆಗಳಿಗೆ ನೀಡುತ್ತಿದ್ದ ಪರೋಪಕಾರಿ ಮನೋಭಾವನೆ ಇದ್ದವರಾಗಿದ್ದರು. ಇಂತಹ ವ್ಯಕ್ತಿಯ ಸಾವು ನಮಗೆ ತುಂಬಲಾರದ ನಷ್ಟ ಎಂದು ಬೇಸರ ವ್ಯಕ್ತಪಡಿಸಿದರು.
ಇದಕ್ಕೂ ಪೂರ್ವದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಸಚಿನ ಮಹಲೆಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಒಂದು ನಿಮಿಷ ಮೌನಾಚಾರಣೆ ನಡೆಸಿದರು.
ಈ ಸಂದರ್ಭದಲ್ಲಿ ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಆಸರಕೇರಿ, ಕೃಷ್ಣ ನಾಯ್ಕ ಆಸರಕೇರಿ, ಭಟ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ದಿನೇಶ ನಾಯ್ಕ, ರಾಜೇಶ ನಾಯ್ಕ, ಈಶ್ವರ ನಾಯ್ಕ ಮುರುಡೇಶ್ವರ, ದತ್ತಾತ್ರೇಯ ನಾಯ್ಕ, ಶಿವಾನಿ ಶಾಂತಾರಾಮ, ಪಾಂಡುರಂಗ ನಾಯ್ಕ ಆಸರಕೇರಿ, ವೆಂಕಟೇಶ ನಾಯ್ಕ ಸೋನಾರಕೇರಿ ಮತ್ತಿತರರು ಪಾಲ್ಗೊಂಡಿದ್ದರು.