ಸಿದ್ದಾಪುರ: ತಾಲೂಕಿನ ಕವಲಕೊಪ್ಪದ ಸಿದ್ಧಿವಿನಾಯಕ ದೇವಾಲಯದ ಸಭಾಂಗಣದಲ್ಲಿ ಬೆಳಸಲಿಗೆ ಯಕ್ಷಕಲಾ ಪ್ರತಿಷ್ಠಾನ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಸಹಕಾರದೊಂದಿಗೆ ಮೂರು ದಿನಗಳ ಕಾಲ ಆಯೋಜಿಸಿದ್ದ ಮುಂಗಾರು ಯಕ್ಷಸಂಭ್ರಮವು ಯಶಸ್ವಿಯಾಗಿ ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿದ್ದ ಸಿದ್ದಾಪುರದ ಶಿಕ್ಷಣ ಪ್ರಸಾರಕ ಸಮಿತಿ ಗೌರವಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಮಾತನಾಡಿ, ಪರಿಶುದ್ಧವಾದ ಕಲೆಯಾದ ಯಕ್ಷಗಾನ ಭವಿಷ್ಯದ ದಾರಿ ದೀಪವಾಗಿದೆ. ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಇದರ ಪರಿಚಯ ಹಾಗೂ ತರಬೇತಿ ಅತ್ಯವಶ್ಯವಾಗಿದ್ದು, ಈ ಮೂಲಕ ಮುಂದಿನ ತಲೆಮಾರಿಗೆ ಪರಿಚಯಿಸಬೇಕಾಗಿದೆ ಎಂದರು. ದಿ.ಬೆಳಸಲಿಗೆ ಗಣಪತಿ ಹೆಗಡೆ ಅವರು ಒಬ್ಬ ಶ್ರೇಷ್ಠ ಕವಿಯಾಗಿ ಪ್ರಸಂಗವನ್ನು ಬರೆದಿದ್ದಾರೆ. ಅವರು ಬರೆದ ಯಕ್ಷಗಾನವನ್ನು ಕಲಾಸಂಘಟಕರು, ಕಲಾಸಕ್ತರು ಹಾಗೂ ಕಲಾವಿದರು ಹೆಚ್ಚೆಚ್ಚು ಪ್ರದರ್ಶನ ಆಗುವ ಹಾಗೆ ಮಾಡಬೇಕು ಎಂದು ಹೇಳಿದರು.
ನಂತರ ಮಾತನಾಡಿದ ಜಿ.ಕೆ.ಭಟ್ಟ ಕಶಿಗೆ ಯಕ್ಷಗಾನ ತರಬೇತಿ ಹಾಗೂ ಅದರ ಪ್ರದರ್ಶನವನ್ನು ಯಕ್ಷಗಾನ ತಿಳಿದ ಪ್ರದೇಶದಲ್ಲಿ ಮಾಡುವುದಕ್ಕಿಂತ ಯಕ್ಷಗಾನ ಗೊತ್ತಿಲ್ಲದ ತಾಲೂಕುಗಳಲ್ಲಿ ಮಾಡುವುದಕ್ಕೆ ಕಲಾಸಂಘಟನೆಗಳು ಮುಂದಾಗಬೇಕು ಎಂದರು. ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ, ಹಾರ್ಸಿಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಡಿ.ಭಟ್ಟ ಅಗ್ಗೇರೆ ಉಪಸ್ಥಿತರಿದ್ದರು. ಸುಜಾತಾ ಹೆಗಡೆ ದಂಟಕಲ್, ಕಾತ್ಯಾಯನಿ ಹೆಗಡೆ ಅತ್ತಿಕೊಪ್ಪ, ಗೀತಾ ಹೆಗಡೆ ಬೆಳಸಲಿಗೆ ಕಾರ್ಯಕ್ರಮ ನಿರ್ವಹಿಸಿದರು.
ನಂತರ ಪ್ರದರ್ಶನಗೊಂಡ ಬ್ರಹ್ಮಕಪಾಲ ಯಕ್ಷಗಾನದ ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಸತೀಶ ಹೆಗಡೆ ದಂಟಕಲ್, ಶಂಕರ ಭಾಗ್ವತ್, ಸಂಪ ಲಕ್ಷ್ಮಿನಾರಾಯಣ, ಶ್ರೀರಮಣ ಭಟ್ಟ ಮುರೂರು ಸಹಕರಿಸಿದರು.
ಮುಮ್ಮೇಳದಲ್ಲಿ ರಾಮಚಂದ್ರ ಹೆಗಡೆ ಕೊಂಡದಕುಳಿ, ಗಣಪತಿ ಹೆಗಡೆ ತೋಟಿಮನೆ, ಶಂಕರ ಹೆಗಡೆ ನೀಲಕೋಡು, ಅಶೋಕ ಭಟ್ಟ ಸಿದ್ದಾಪುರ, ಷಣ್ಮುಖ ಗೌಡ, ಶ್ರೀಧರ ಹೆಗಡೆ ಚಪ್ಪರಮನೆ, ನಿರಂಜನ ಜಾಗನಳ್ಳಿ, ವೆಂಕಟೇಶ ಬಗ್ರಿಮಕ್ಕಿ, ಅವಿನಾಶ ಕೊಪ್ಪ, ನಿತಿನ್ ದಂಟಕಲ್ ವಿವಿಧ ಪಾತ್ರನಿರ್ವಹಿಸಿ ಮೆಚ್ಚುಗೆಗಳಿಸಿದರು.