ಸಿದ್ದಾಪುರ: ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಆರಂಭಗೊಂಡು 15 ದಿನ ಕಳೆದರೂ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರಗಳು ವಿತರಣೆಗೊಂಡಿಲ್ಲ. ತಾಲೂಕಿನ 205 ಪ್ರಾಥಮಿಕ ಮತ್ತು 32 ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರದ ನಿರ್ಲಕ್ಷದಿಂದ ತೊಂದರೆಯಾಗುತ್ತಿದೆ. ಸರಕಾರ ಈ ಸಮಸ್ಯೆಯ ಕುರಿತು ಗಂಭೀರವಾಗಿ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ.ಆಗ್ರಹಿಸಿದರು.
ಅವರು ಪಟ್ಟಣದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಸಮಸ್ಯೆಯ ಜೊತೆಗೆ ವಿದ್ಯಾರ್ಥಿಗಳು ಬಸ್ ಸಂಚಾರದ ಸಮಸ್ಯೆಯನ್ನು ಎದುರಿಸುತ್ತ ಹೈರಾಣವಾಗಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ಈ ಹಿಂದೆ ಇದ್ದ 17 ಕಡೆಗಳ ಬಸ್ ಸಂಚಾರವನ್ನು ರದ್ದುಗೊಳಿಸಿದೆ. ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕೊಡುವ ನೆಪದಲ್ಲಿ ಪುರುಷರ ಪ್ರಯಾಣದ ದರ ಹೆಚ್ಚಿಸಿದೆ. ಬಸ್ ಸಂಚಾರ ರದ್ದುಗೊಳಿಸಿದ ಕಾರಣ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಯಾಣಕ್ಕೆ ಅನನುಕೂಲವಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಕಾರಣ ಹಲವು ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ಬರಲು ಇರುವ ಬಸ್ ಗಳಲ್ಲಿ ಅವಕಾಶವಾಗುತ್ತಿಲ್ಲ. ವಾಪಸ್ಸು ಮನೆಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಹಿಂದಿನ ಶಾಸಕ ವಿಶ್ವೇಶ್ವರ ಹೆಗಡೆ ಬಸ್ ತೊಂದರೆಯಾದಲ್ಲಿ ವಿಷಯ ತಿಳಿದ ತಕ್ಷಣ ಬಸ್ ವ್ಯವಸ್ಥೆ ಕಲ್ಪಿಸುತ್ತಿದ್ದರು. ರದ್ದುಗೊಳಿಸಿದ ಬಸ್‌ಗಳ ಸಂಚಾರವನ್ನು ಪುನ: ಆರಂಭಿಸುವ ಜೊತೆಗೆ ಅವಶ್ಯಕತೆ ಇರುವ 12 ಕಡೆಗಳಲ್ಲಿ ಬಸ್ ಸಂಚಾರ ಆರಂಭಿಸಬೇಕು ಎಂದು ಶಾಸಕರು ಮತ್ತು ಕೆ.ಎಸ್.ಆರ್.ಟಿ.ಸಿ.ಅಧಿಕಾರಿಗಳನ್ನು ಆಗ್ರಹಿಸುತ್ತಿದ್ದು ಒಂದು ವಾರ ಸಮಯ ನೀಡುತ್ತಿದ್ದೇವೆ. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಸಮೂಹದ ಜೊತೆಗೆ ಬಸ್ ನಿಲ್ದಾಣದ ಎದುರು ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಈಗಿನ ರಾಜ್ಯ ಸರಕಾರ ರೈತರಿಗೆ ಒದಗಿಸುತ್ತಿದ್ದ ಬಿತ್ತನೆ ಬೀಜಗಳ ದರವನ್ನು ಹೆಚ್ಚುಮಾಡಿ ರೈತರಿಗೆ ಇನ್ನಷ್ಟು ಕಷ್ಟ ಕೊಡುತ್ತಿದೆ. ಯಡಿಯೂರಪ್ಪ ಸರಕಾರದಲ್ಲಿ ರೈತರಿಗೆ ನೀಡುತ್ತಿದ್ದ 4 ಸಾವಿರ ರೂ. ಸಹಾಯವನ್ನು ಸ್ಥಗಿತಗೊಳಿಸಿದ್ದಲ್ಲದೇ ಈಗ ಬಿತ್ತನೆ ಬೀಜಗಳ ದರ ಹೆಚ್ಚಿಸಿದೆ. ಎಲ್ಲ ಬಿತ್ತನೆ ಬೀಜಗಳ 50 ಕೆ.ಜಿ.ಬ್ಯಾಗ್‌ಗಳಿಗೆ 2003ರಲ್ಲಿ ಇದ್ದ ದರಕ್ಕಿಂತ 400ರಿಂದ 500 ರೂ.ಗಳಷ್ಟು ಹೆಚ್ಚಿಸಿದೆ. ಈ ದರವನ್ನು ಕಡಿಮೆ ಮಾಡಿ ಕಷ್ಟದಲ್ಲಿರುವ ರೈತರ ಹೊರೆ ಕಡಿಮೆ ಮಾಡಿ ಎಂದು ಕ್ಷೇತ್ರದ ಶಾಸಕರನ್ನು ಆಗ್ರಹಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಕೆ.ಮೇಸ್ತ,ತೋಟಪ್ಪ ನಾಯ್ಕ, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ, ಪ್ರಮುಖರಾದ ಕೃಷ್ಣಮೂರ್ತಿ ಕಡಕೇರಿ,ಗುರುರಾಜ ಶಾನಭಾಗ, ಮಾರುತಿ ನಾಯ್ಕ ಹೊಸೂರು, ನಂದನ ಬರ‍್ಕರ,ಸುರೇಶ ಬಾಲಿಕೊಪ್ಪ.ಮಂಜುನಾಥ ಭಟ್, ವೆಂಕಟೇಶ ಬಿ., ಎನ್.ಆರ್.ಹೆಗಡೆ ಮುಂತಾದವರಿದ್ದರು.