ಶಿರಸಿ: ಅಖಿಲ ಹವ್ಯಕ ಮಹಾ ಸಭಾದಿಂದ ಶಿರಸಿ ಶೈಕ್ಷಣಿಕ ಜಿಲ್ಲೆಯ ಹವ್ಯಕ ಶಿಕ್ಷಕರ ಸಮಾವೇಶ ಜೂನ್ 16 ರಂದು ಬೆಳಿಗ್ಗೆ 7ರಿಂದ ರಾತ್ರಿ 8 ಗಂಟೆಯ ತನಕ ನಗರದ ತೋಟಗಾರ್ಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಹವ್ಯಕ ಶಿಕ್ಷಕರ ಸಮಾವೇಶದ ಸಂಯೋಜಕ ಪ್ರಮುಖ, ಮಹಾ ಸಭೆಯ ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ ತಿಳಿಸಿದರು.
ನಗರದ ಯೋಗ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ, 1942ರಲ್ಲಿ ಪ್ರಾರಂಭಗೊಂಡ ಮಹಾಸಭೆಗೆ ದೊಡ್ಡ ಇತಿಹಾಸ ಇದೆ. ಎಲ್ಲ ಹವ್ಯಕರಿಗೂ ಸಂಬಂಧಿಸಿದ ಮಾತೃ ಸಂಸ್ಥೆಯಾಗಿದೆ. ವಿವಿಧ ಸ್ಪರ್ಧೆಗಳು, ಚುಟುಕು ಗೋಷ್ಠಿ, ಉಪನ್ಯಾಸ, ಶಿಕ್ಷಕರಿಂದ ತಾಳಮದ್ದಲೆ, ಸನ್ಮಾನ ನಡೆಯಲಿದೆ. ಬೆಳಿಗ್ಗೆ 7 ರಿಂದ ಶಿಕ್ಷಕರಿಂದ ಗಾಯತ್ರೀ ಜಪಾನುಷ್ಠಾನ, ಗಾಯತ್ರೀ ಹವನ, ಶಿಕ್ಷಕಿಯರಿಂದ ಕುಂಕುಮಾರ್ಚನೆ, ಭಗವದ್ಗೀತಾ ಪಠಣ ಜರುಗಲಿದೆ. ಬೆಳಿಗ್ಗೆ 9.30ರಿಂದ ಉದ್ಘಾಟನೆ ನಡೆಯಲಿದ್ದು, ಅಧ್ಯಕ್ಷತೆಯನ್ನು ಮಹಾ ಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ ವಹಿಸಿಕೊಳ್ಳಲಿದ್ದಾರೆ. ಉದ್ಘಾಟನೆಯನ್ನು ಸಂಸ್ಕೃತ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೋ. ಮಲ್ಲೇಪುರಂ ಜಿ.ವೆಂಕಟೇಶ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಶಾಸಕ ಶಿವರಾಮ ಹೆಬ್ಬಾರ್, ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ, ಡಯಟ್ ಪ್ರಾಚಾರ‍್ಯ ಎಂ.ಎಸ್.ಹೆಗಡೆ, ಮಹಾಸಭೆ ಉಪಾಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಭಾಗವಹಿಸಲಿದ್ದಾರೆ. ವಿದ್ವಾಂಸರಾದ ವಿಶ್ವನಾಥ ಭಟ್ಟ ನೀರಗಾನ ಗಾಯತ್ರೀ ಮಹತ್ವದ ಕುರಿತು ಮಾತನಾಡಲಿದ್ದಾರೆ.
ಬೆಳಿಗ್ಗೆ 11ಕ್ಕೆ ಖ್ಯಾತ ವಿದ್ವಾಂಸ, ಕರ್ನಾಟಕ ಹರಿದಾಸ ಅಕಾಡೆಮಿ ಅಧ್ಯಕ್ಷ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಬಳಿಕ ಆಶು ಭಾಷಣ, ಪ್ರಬಂಧ, ಬಳ್ಳಿ ರಂಗೋಲಿ, ಕಸದಿಂದ ರಸ, ಹವ್ಯಕ ಸಂಪ್ರದಾಯಗೀತೆಗಳ ಸ್ಪರ್ಧಾ ಸೌರಭ 12ರಿಂದ ನಡೆಯಲಿದೆ. ಜೂ.10ರೊಳಗೆTel:+919480211125 ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ. ಹವ್ಯಕ ಸಂಸ್ಕಾರಗಳಿಂದ ಸಾಮಾಜಿಕ ಸಮಸ್ಯೆಗಳ ಪರಿಹಾರ ಕುರಿತು ಚರ್ಚಾ ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 2 ರಿಂದ ಒನ್ ಮಿನಿಟ್ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. 2.30 ರಿಂದ ಸಾಹಿತ್ಯ ಚುಟುಕು ಗೋಷ್ಠಿ, 3ರಿಂದ ಭಾರತ ಸಂಸ್ಕೃತಿ ಪರಂಪರೆ ಉಳಿಸುವಲ್ಲಿ ಇಂದಿನ ಶಿಕ್ಷಕರ ಪಾತ್ರದ ಕುರಿತು ವಿ. ಅನಂತಮೂರ್ತಿ ಭಟ್ಟ ಯಲುಗಾರ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 3.30ರಿಂದ ಖ್ಯಾತ ವಾಗ್ಮಿ ಡಾ. ಕೆ.ಪಿ.ಪುತ್ತೂರಾಯ ಆಶಯ ಮಾತುಗಳನ್ನು ಆಡಲಿದ್ದಾರೆ. ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ‍್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಸಾನ್ನಿಧ್ಯ ನೀಡಲಿದ್ದಾರೆ. ಮಹಾ ಸಭೆ ಅಧ್ಯಕ್ಷ ಡಾ. ಗಿರಿಧರ ಕಜೆ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಸಂಸ್ಕೃತ ವಿವಿ ಕುಲಪತಿ ಡಾ. ಅಹಲ್ಯಾ ಶರ್ಮಾ, ಮಾಜಿ ವಿಧಾನ ಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿಕ್ಷಕರ ಸೊಸೈಟಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಪಾಲ್ಗೊಳ್ಳಲಿದ್ದಾರೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ತಮ್ಮಣ್ಣ ಬೀಗಾರ, ಜಿ.ಜಿ.ಹೆಗಡೆ ಬಾಳಗೋಡ, ಆರ್.ಎಸ್. ಹೆಗಡೆ ಭೈರುಂಬೆ, ಶ್ರೀಪಾದ ಭಟ್ಟ, ಡಿ.ಪಿ.ಹೆಗಡೆ, ಕೆ.ಎಲ್.ಭಟ್ಟ, ನಾರಾಯಣ ಭಾಗವತ, ರಾಜ್ಯ ಪ್ರಶಸ್ತಿ ಪಡೆದ ಎನ್.ಎಸ್.ಭಟ್ಟ, ಸತೀಶ ಯಲ್ಲಾಪುರ, ಕೆ.ಎ.ಹೆಗಡೆ, ವಿ.ಟಿ.ಹೆಗಡೆ, ಪ್ರಭಾಕರ ಭಟ್ಟ, ನಾಗಪತಿ ಹೆಗಡೆ, ಜಿ.ಎಸ್.ಭಟ್ಟ, ಎಸ್.ಎನ್.ಭಾಗವತ್ ಅವರನ್ನು ಗೌರವಿಸಲಾಗುತ್ತಿದೆ. ಬಳಿಕ ಯಕ್ಷ ಭಾರತಿ ಕಲಾ ವೇದಿಕೆಯಿಂದ ಶಿಕ್ಷಕರ ಬಳಗದಿಂದ ತಾಳಮದ್ದಲೆ ನಡೆಯಲಿದೆ ಎಂದರು.
ಉಪಾಧ್ಯಕ್ಷ ಆರ್.ಎಂ.ಹೆಗಡೆ, ಪ್ರಮುಖರಾದ ಶಶಾಂಕ ಹೆಗಡೆ, ವಿ.ಎಂ.ಹೆಗಡೆ, ಉದಯ ಭಟ್ಟ, ಗೀತಾಂಜಲಿ ಭಟ್ಟ, ದತ್ತಾತ್ರಯ ಹೆಗಡೆ, ಗಣೇಶ ಭಟ್ ಕಾಜಿನಮನೆ, ರಾಮಚಂದ್ರ ಭಟ್ಟ ಶಿರಳಗಿ, ಡಿ.ಪಿ.ಹೆಗಡೆ ಇತರರು ಇದ್ದರು.
ಎರಡುವರೆ ಸಾವಿರಕ್ಕೂ ಅಧಿಕ ಹವ್ಯಕ ಶಿಕ್ಷಕರು ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಇದ್ದಾರೆ. ಸಮಾವೇಶಕ್ಕೆ ಬನ್ನಿ ಎಂದು ಶಿಕ್ಷಕರ ಮನೆಗೇ ಹೋಗಿ ಕರೆಯಲು ತೀರ್ಮಾನಿಸಿದ್ದೇವೆ. ಶಿಕ್ಷಕರು ಸಂಸ್ಕಾರ ಹೊಂದಿದ್ದರೆ ಮಕ್ಕಳೂ ಉತ್ತಮ ಪ್ರಜೆಗಳಾಗಲು ಸಾಧ್ಯ. ಡಿ.27,28,29ರಂದು ತೃತೀಯ ವಿಶ್ವ ಹವ್ಯಕ ಸಮಾವೇಶ ಬೆಂಗಳೂರಿನಲ್ಲಿ ನಡೆಯಲಿದೆ.
ಪ್ರಶಾಂತ ಭಟ್ಟ, ಸೆಕ್ರೇಟರಿ