ನಿರಂತರ ಹಿರಿಯ ವಿದ್ಯಾರ್ಥಿ ಸಂಘದಿಂದ ಸ್ನೇಹ ಮಿಲನ-ಗುರುವಂದನಾ ಕಾರ್ಯಕ್ರಮ
ಶಿವಮೊಗ್ಗ: ತಲೆಮಾರಿನಿಂದ ತಲೆಮಾರಿಗೆ ಶಿಕ್ಷಣ ಪದ್ಧತಿ ಬದಲಾಗುತ್ತಿದ್ದರೂ ಗುರು ಅನ್ನುವ ಸ್ಥಾನ ಬದಲಾಗಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಎಸ್.ಎನ್. ನಾಗರಾಜ ಹೇಳಿದರು.
ಅವರು ಇಲ್ಲಿಯ ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ನಿರಂತರ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಸ್ನೇಹ ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಗುರುವು ವಿದ್ಯಾರ್ಥಿಗಳಿಗೆ ನೀಡುವ ಜ್ಞಾನ ಮತ್ತು ವಿವೇಕ ಹಾಗೇ ಇರುತ್ತದೆ. ಅವುಗಳನ್ನು ಯಾರಿಂದಲೂ ಕಸಿದುಕೊಳ್ಳಲಾಗುವುದಿಲ್ಲ. ಭವಿಷ್ಯದಲ್ಲಿ ವಿದ್ಯಾರ್ಥಿಗಳನ್ನು ಕಾಪಾಡುವುದೇ ಇವು ಎಂದ ಅವರು ಭಾವನಾತ್ಮಕ ಹೃದಯವನ್ನು ಬೆಸೆಯುವುದೇ ಗುರುವಂದನೆ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ಭಾರತೀಯ ಪರಂಪರೆಯಲ್ಲಿ ಗುರುವಿಗೆ ದೊಡ್ಡ ಸ್ಥಾನವಿದೆ. ಭಾರತೀಯ ಶಿಕ್ಷಣ ಪದ್ಧತಿ ವಿದೇಶಿಯರ ದಾಳಿಯಿಂದಾಗಿ ಬದಲಾವಣೆ ಕಂಡಿದೆ. ಪ್ರಾಚೀನ ಕಾಲದ ಉತ್ಕೃಷ್ಠ ವಿಶ್ವವಿದ್ಯಾಲಯಗಳಾಗಿದ್ದ ನಳಂದಾ, ತಕ್ಷಶಿಲಾ, ಉಜ್ಜಯಿನಿ ಮೊಲಾದವುಗಳು ಪರಕೀಯರ ದಾಳಿಯಿಂದ ಅವನತಿ ಹೊಂದಿದರೆ, ಬ್ರಿಟಿಷರು ಮೆಖಾಲೆ ಶಿಕ್ಷಣ ಪದ್ಧತಿಯನ್ನು ನಮ್ಮ ಮೇಲೆ ಹೇರಿದರು. ಇಂದಿಗೂ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂಬ ವಿಷಾದವನ್ನು ವ್ಯಕ್ತಪಡಿಸಿದರು.
ಗುರು ಮತ್ತು ಟೀಚರ್ ಶಬ್ದದ ನಡುವೆ ವ್ಯತ್ಯಾಸವಿದೆ ಎಂದ ಅವರು ಗುರು ಮಾರ್ಗದರ್ಶಕನಾಗಿದ್ದರೆ ಟೀಚರ್ ದಾರಿ ತೋರಿಸುವನಾಗಿರುತ್ತಾನೆ. ಗುರು ವಿದ್ಯಾರ್ಥಿಯು ಉತ್ತರಿಸುವ ಉತ್ತರಗಳ ಮೇಲೆ ಪ್ರಶ್ನೆಗಳನ್ನು ಕೇಳುವವನಾಗಿರುತ್ತಾನೆ. ವಾಸ್ತವದಲ್ಲಿ ಪ್ರಶ್ನೋತ್ತರ ಪದ್ಧತಿಯು ವಿದ್ಯಾಭ್ಯಾಸದ ಕ್ರಮವಾಗಿರುತ್ತದೆ ಎಂದು ಅವರು ವಿಶ್ಲೇಷಿಸಿದರು.
ಹಿರಿಯ ವಿದ್ಯಾರ್ಥಿಗಳು ತಾವು ಕಲಿತ ವಿದ್ಯಾ ಗುರುಗಳ ಬಗ್ಗೆ ಗೌರವ, ಸಂಸ್ಥೆಯ ಬಗ್ಗೆ ಸದಾ ಕಾಲ ಉತ್ತಮ ಸಂಬಂಧ, ಪ್ರೀತಿಗಳನ್ನು ಇಟ್ಟುಕೊಳ್ಳಬೇಕು ಎಂದು ಅವರು ಆಶಿಸಿದರು.
ಇತ್ತೀಚೆಗೆ ಸೇವಾ ನಿವೃತ್ತಿ ಹೊಂದಿದ ಇತಿಹಾಸ ಪ್ರಾಧ್ಯಾಪಕ ಮತ್ತು ಎನ್.ಎಸ್.ಎಸ್.ಅತ್ಯುತ್ತಮ ಕಾರ್ಯಕ್ರಮಾಧಿಕಾರಿ ಪ್ರಶಸ್ತಿ ಪುರಸ್ಕೃತರಾದ ಡಾ.ಬಾಲಕೃಷ್ಣ ಹೆಗಡೆ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ನೌಕರ ತನಗೆ ಅನ್ನ ಕೊಟ್ಟ ಸಂಸ್ಥೆಯನ್ನು ಮರೆಯಬಾರದು. ವಿದ್ಯಾರ್ಥಿಯು ತನಗೆ ವಿದ್ಯೆ ನೀಡಿದ ಗುರುಗಳನ್ನು ಮರೆಯಬಾರದು. ವಿದ್ಯೆ ಕಲಿಸಿದ ಗುರುವನ್ನು ಮರೆಯುವ ಅಥವಾ ನಿರ್ಲಕ್ಷಿಸುವ ವಿದ್ಯಾರ್ಥಿಯು ತನ್ನ ಜೀವನದಲ್ಲಿ ಉತ್ತಮ ಭವಿಷ್ಯವನ್ನು ಕಾಣಲಾರ ಎಂದು ಕಿವಿ ಮಾತು ಹೇಳಿದರು.
ತಮ್ಮ ಸೇವಾವಧಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲು ಮತ್ತು ಸಾಧನೆ ಗೈಯಲು ವಿದ್ಯಾರ್ಥಿಗಳ ಸಹಕಾರವೇ ಪ್ರಮುಖ ಪಾತ್ರ ವಹಿಸಿತಲ್ಲದೆ ಕಾಲೇಜಿನ ಪ್ರಾಂಶುಪಾಲರ, ಆಡಳಿತ ಮಂಡಳಿಯ ಪ್ರೋತ್ಸಾಹವೂ ಕಾರಣವಾಯಿತು ಎಂದು ಸನ್ಮಾನ ಸ್ವೀಕರಿಸಿದ ಡಾ.ಬಾಲಕೃಷ್ಣ ಹೆಗಡೆ ಕೃತಜ್ಞತೆ ಸಲ್ಲಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್.ಎಸ್. ನಾಗಭೂಷಣ ಅಧ್ಯಕ್ಷತೆ ವಹಿಸಿದ್ದರು. ನಿರಂತರ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡಾ.ಅಶ್ವಿನಿ ಬಿದರಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಟಿಎನ್‌ಸಿ ಕಾಲೇಜು ಪ್ರಾಚಾರ್ಯೆ ಪ್ರೊ.ಮಮತಾ ಪಿ.ಆರ್., ಸನ್ಮಾನಿತರಾದ ಶ್ರೀಮತಿ ಶಾಂತಮ್ಮ, ಸರೋಜಾ ಚಂಗೊಳ್ಳಿ, ಎಸ್.ಬಿ.ಉಷಾ, ರೇಖಾ ಬಸವರಾಜ್, ಸವಿತಾ ಮೊದಲಾದವರು ವೇದಿಕೆಯಲ್ಲಿದ್ದರು. ಸಂಘದ ಉಪಾಧ್ಯಕ್ಷರಾದ ಡಾ.ರೇಶ್ಮಾ ಸ್ವಾಗತಿಸಿದರು. ನಿರ್ದೇಶಕರಾದ ಡಾ.ಎಸ್.ಟಿ.ಪವಿತ್ರಾ ಕಾರ್ಯಕ್ರಮ ನಿರ್ವಹಿಸಿದರು. ಮತ್ತೋರ್ವ ನಿರ್ದೇಶಕರಾದ ಶ್ರೀಮತಿ ನಿವೇದಿತಾ ವಂದಿಸಿದರು.