ಶಿಕ್ಷಣ ವ್ಯವಸ್ಥೆ ಹದಗೆಡಿಸಿದ ಕಾಂಗ್ರೆಸ್ ಸರಕಾರ | ಅಪರಾಧಿಗೆ ರಕ್ಷಣೆ ನೀಡುವುದೇ ಕಾಂಗ್ರೆಸ್ ಸಾಧನೆ
ಶಿರಸಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದಲ್ಲಿ ಶಿಕ್ಷಣ ಇಲಾಖೆ ಗುಣಮಟ್ಟ ಹಾಗೂ ಸೌಲಭ್ಯ ಎರಡರಲ್ಲೂ ಕಳಪೆಯಾಗಿದೆ. ಶಿಕ್ಷಣ ಇಲಾಖೆ ನಿಭಾಯಿಸಲು ಮಧು ಬಂಗಾರಪ್ಪ ಅಸಮರ್ಥ. ಮುಖ್ಯಮಂತ್ರಿಗಳು ಅವರನ್ನು ಕೂಡಲೇ ಮಂತ್ರಿ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಶಿಕ್ಷಣ ಇಲಾಖೆ ವೈಫಲ್ಯದ ತುತ್ತತುದಿಗೆ ತಲುಪಿದೆ. ರಾಜ್ಯದಲ್ಲಿ ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ಕೊಡುತ್ತಿದ್ದೇವೆ ಎನ್ನುವ ಕೇಳುವ ಪ್ರಸಂಗ ಬಂದಿದೆ. ಮಕ್ಕಳಿಗೆ ಶಿಕ್ಷಣದಲ್ಲಿ ಗೊಂದಲ ಸೃಷ್ಟಿಸಿ ಗ್ರೇಸ್ ಮಾರ್ಕ್ಸ ಕೊಡುವ ಸ್ಥಿತಿ ತಂದಿಟ್ಟಿದ್ದಾರೆ. ಕಾಂಗ್ರೆಸ್ ಆಡಳಿತಕ್ಕೆ ಬಂದ ಒಂದೇ ವರ್ಷದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಹದಗೆಡಿಸಿದಂತೆ ಕಾಣುತ್ತದೆ. ಶೈಕ್ಷಣಿಕ ವರ್ಷದಲ್ಲಿ ಗ್ರೇಸ್ ಮಾರ್ಕ್ಸ್ ಕೊಡುತ್ತಾರೆ ಎಂದರೆ ಕಲಿಕೆಯ ವ್ಯವಸ್ಥೆ ಯಾವ ಹಂತಕ್ಕೆ ಬಂದಿದೆ ? ಎಂದು ಪ್ರಶ್ನಿಸಿದರು.
ಶೈಕ್ಷಣಿಕ ವರ್ಷದ ಮಧ್ಯೆ ಇರುವ ಪಾಠ ತೆಗೆದು, ಹೊಸ ಪಾಠವನ್ನು ಹಾಕಿದರು. ಆದರೆ ಯಾವ ಪಾಠ ಎನ್ನುವುದನ್ನು ಎಲ್ಲ ಶಾಲೆಗೆ ತಲುಪಿಸದೇ ಗೊಂದಲ ಸೃಷ್ಟಿಸಿದರು. ಇದು ಇದರ ಪರಿಣಾಮ ಇಡೀ ರಾಜ್ಯದ ಮಕ್ಕಳ ಮೇಲೆ ಹಾಗೂ ಜನರ ಮೇಲೂ ಆಗಲಿದೆ. ಸ್ಟೇಟ್ ಎಜ್ಯುಕೇಶನ್, ಕೇಂದ್ರ ಎಜ್ಯುಕೇಶನ್ ಸಿಸ್ಟಂ ನಡುಗೆ ಗೊಂದಲ ಸೃಷ್ಟಿಸಿ ಇಲಾಖೆಯನ್ನೇ ಬಲಿ ತೆಗೆದುಕೊಳ್ಳಲು ಹೊರಟಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇ ಶಿಕ್ಷಣ ಇಲಾಖೆ ಪರಿಶೀಲನೆ ಮಾಡಿ ಶಿಕ್ಷಣ ಮಂತ್ರಿಗೆ ಛೀಮಾರಿ ಹಾಕಿದ್ದಾರೆ ಎಂದು ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರಕಾರದ್ದು ಸಾಧನೆ ಸೊನ್ನೆ:
ಕಾಂಗ್ರೆಸ್ ಸರಕಾರ ಹಣಗಳಿಕೆಗೆಂದೇ ಅಧಿಕಾರಕ್ಕೆ ಬಂದಂತೆ ಕಾಣುತ್ತಿದೆ. ಆರ್ಥಿಕವಾಗಿ ದಿವಾಳಿಯಾಗುತ್ತಿದೆ ಎನ್ನುವುದು ಆತಂಕದ ವಿಚಾರ. ಕಳೆದ ಒಂದು ವರ್ಷದ ಅಧಿಕಾರಾವಧಿ ಅವಲೋಕ ಮಾಡಿದರೆ ಸರಕಾರದ ಸಾಧನೆ ಶೂನ್ಯ. ಸಿದ್ದರಾಮಯ್ಯ, ಡಿಕೆಶಿ ನೇತೃತ್ವವೇ ಜನರಿಗೆ ಬೇಸರ ತರಿಸಿದೆ. ಒಬ್ಬರು ಸಿಎಂ ಖುರ್ಚಿ ಉಳಿಸಿಕೊಳ್ಳಲು ನೋಡಿದರೆ, ಇನ್ನೊಬ್ಬರು ಅಧಿಕಾರ ಪಡೆಯಲು ನೋಡುತ್ತಿದ್ದಾರೆ. ಇದರಿಂದಾಗಿ ಆಡಳಿತ ಕುಸಿದಿದೆ. ಯಾವುದೇ ಹೇಳಿಕೊಳ್ಳುವಂಥ ಸಾಧನೆ ಇಲ್ಲ. ಗುತ್ತಿಗೆದಾರರಿಗೆ ಬಿಲ್ ಪಾವತಿ ಇಲ್ಲ. ಹಾಲಿನ ಪ್ರೋತ್ಸಾಹ ಧನ ಇಲ್ಲ. ಹೀಗಾಗಿ ಈ ಸರಕಾರಕ್ಕೆ ಗ್ರೇಸ್ ಮಾರ್ಕ್ಸ್ ಕೊಟ್ಟರೂ ಪಾಸಾಗದ ಸ್ಥಿತಿ ಬಂದಿದೆ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸಂವಿಧಾನ ಬದ್ಧ ಜವಾಬ್ದಾರಿಯನ್ನು ನಿರ್ವಹಸುವುದನ್ನೇ ಮರೆತಿದೆ. ಜನರ ಜೀವ, ಆಸ್ತಿ ಪಾಸ್ತಿ ರಕ್ಷಣೆಯಲ್ಲೇ ಸರಕಾರ ಎಡವಿದೆ. ರಾಜ್ಯದಲ್ಲಿ ನಾಲ್ಕು ತಿಂಗಳಲ್ಲಿ 400 ಕ್ಕಿಂತ ಹೆಚ್ಚಿನ ಕೊಲೆಯಾಗಿದೆ. ಕಾಂಗ್ರೆಸ್ ಸರ್ಕಾರ ಅಪರಾಧಿಗಳಿಗೆ ರಕ್ಷಣೆ ನೀಡುತ್ತಾ ರಾಷ್ಟ್ರ ದ್ರೋಹಿ ಮನಸ್ಥಿತಿಯವರಿಗೆ ಪ್ರೋತ್ಸಾಹ ಕೊಡುತ್ತಿದೆ. ಎಸ್‌ಡಿಪಿಐ, ಪಿಎಫ್‌ಐ ಮೇಲಿನ ಪ್ರಕರಣ ವಾಪಸ್ ಪಡೆದಿದ್ದು, ಅಪರಾಧಿಗಳು ವಿಜೃಂಭಿಸುವಂತೆ ಮಾಡಿದೆ. ಇದರಿಂದ ರಾಜ್ಯದಲ್ಲಿ ಗೃಹ ಸಚಿವರು ಇದ್ದಾರಾ? ಎಂದು ಪ್ರಶ್ನೆ ಮಾಡುವಂತಾಗಿದೆ. ಇದೆಲ್ಲವೂ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಗೃಹ ಸಚಿವ ಪರಮೇಶ್ವರ ಅವರ ಹೆಸರಿಗೆ ಕೆಟ್ಟ ಹೆಸರು ತರಲು ಪ್ರಯತ್ನ ಮಾಡಿದಂತಿದೆ ಎಂದರು.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಶತ ಸಿದ್ದವಾಗಿದ್ದು. 2.50 ಲಕ್ಷ ಮತಗಳಿಂದ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದ ಕಾಗೇರಿ. ಚುನಾವಣೆಗೆ ಸಹಕರಿಸಿದ ಎಲ್ಲರಿಗೆ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಉಷಾ ಹೆಗಡೆ, ಆನಂದ ಸಾಲೇರ್, ಆರ್. ವಿ, ಹೆಗಡೆ ಇದ್ದರು.
ಯಲ್ಲಾಪುರ ಶಾಸಕ ಹೆಬ್ಬಾರ್ ವಿರುದ್ಧ ಗುಡುಗುದ ಕಾಗೇರಿ
ಶಿವರಾಮ್ ಹೆಬ್ಬಾರ್ ಅವರಿಗೆ ಬಿಜೆಪಿ ಹೊಂದಾಣಿಕೆ ಆದಂತೆ ಕಾಣುತ್ತಿಲ್ಲ. ಇಂಥ ಸಂದರ್ಭದಲ್ಲಿ ಅವರು ಪಕ್ಷದಲ್ಲಿ ಇದ್ದೂ ಇಲ್ಲದಂತೆ ಇರುವ ಬದಲು ರಾಜೀನಾಮೆ ಕೊಟ್ಟು ಜನರ ಬಳಿಗೆ ಹೋಗಬೇಕು. ಜನಪ್ರತಿನಿಧಿಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೆಬ್ಬಾರ್ ಕಾರ್ಯವೈಖರಿ ಸರಿ ಕಾಣುತ್ತಿಲ್ಲ. ಹೆಬ್ಬಾರ್ ಅವರು ಈ ಬಾರಿಯ ಚುನಾವಣೆಯಲ್ಲಿ ಏನು ಮಾಡಿದ್ದಾರೆ ಎನ್ನುವುದು ಜನರಿಗೆ ಗೊತ್ತಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.