ಮೆ.26ಕ್ಕೆ ಆರಾಧನಾ ಕಾರ್ಯಕ್ರಮ | ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ
ಶಿರಸಿ: ಲಯನ್ಸ್ ಎಜ್ಯುಕೇಶನ್ ಸೊಸೈಟಿ ಮತ್ತು ಲಯನ್ಸ್ ಕ್ಲಬ್‌ನಿಂದ ವತಿಯಿಂದ ನಡೆಯುತ್ತಿರುವ ಲಯನ್ಸ್ ಡಾ.ಭಾಸ್ಕರ ಸ್ವಾದಿ ಮೆಮೋರಿಯಲ್ ಪದವಿಪೂರ್ವ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಾಣಿಜ್ಯ ಶಾಸ್ತ್ರ ವಿಭಾಗವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಲಯನ್ಸ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಲ.ಪ್ರಭಾಕರ ಹೆಗಡೆ ಹೇಳಿದರು.
ಅವರು ಗುರುವಾರ ನಗರದ ಎಜ್ಯುಕೇಶನ್ ಸೊಸೈಟಿಯ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನ ಬೇಸ್ ಸಂಸ್ಥೆಯ ಸಹಯೋಗದೊಂದಿಗೆ ಕಳೆದ ಶೈಕ್ಷಣಿಕ ವರ್ಷದಲ್ಲಿ ವಿಜ್ಞಾನ ವಿಭಾಗವನ್ನು ಪ್ರಾರಂಭಿಸಲಾಗಿದ್ದು, ಈ ವರ್ಷದಿಂದ ವಾಣಿಜ್ಯ ಶಾಸ್ತ್ರ ವಿಭಾಗವನ್ನು ಪ್ರಾರಂಭಿಸುತ್ತಿದ್ದೇವೆ. ಹೊರ ದೇಶದಲ್ಲಿ ಅತ್ಯಂತ ಬೇಡಿಕೆಯಿರುವ ಸಿಎ, ಸಿಎಸ್, ಸಿಎಮ್ಎ ಕೋಚಿಂಗ್ ನೀಡಲಾಗುತ್ತದೆ. ಶಿರಸಿಯ ಪ್ರತಿಷ್ಠಿತ ಅಕೌಂಟನ್ಸಿ ವರ್ಲ್ಡ್ ನ ರವಿ ಹೆಗಡೆ ಇದರ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಲಿದ್ದಾರೆ ಎಂದರು.
ಹಿರಿಯ ಶಿಕ್ಷಣ ತಜ್ಞ ಲಯನ್ ರವಿ ನಾಯ್ಕ ಮಾತನಾಡಿ, ಸೈನ್ಸ್ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶವಿದೆ. ವಾಣಿಜ್ಯ ವಿಭಾಗದಲ್ಲಿ ಅವಕಾಶಗಳ ಕುರಿತಾಗಿ ಹೆಚ್ಚು ಆಸಕ್ತಿ ಮೂಡಿಸಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ವಾಣಿಜ್ಯ ಶಾಸ್ತ್ರಕ್ಕೆ ಪೂರಕವಾಗಿ ಬಹು ಬೇಡಿಕೆಯಿರುವ ಸಿಎ/ಸಿಎಸ್/ಸಿಎಮ್ಎ ಗೆ ಸಂಬಂಧಿಸಿ ಫೌಂಡೇಶನ್ ಕೋರ್ಸ್ ಗಳಿಗೆ ಕೋಚಿಂಗ್ ಸೌಲಭ್ಯಗಳನ್ನು ನೀಡಲಿದ್ದೇವೆ ಎಂದರು. ವಿಜ್ಞಾನ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ಪ್ರತಿಭಾ ಪುರಸ್ಕಾರ ನೀಡಲು ತೀರ್ಮಾನಿಸಲಾಗಿದ್ದು, ಮೇ 26 ರಂದು ಸಂಜೆ 5.30 ರಿಂದ ರಾತ್ರಿ 9.30 ರವರೆಗೆ ಆರಾಧನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉಸ್ತಾದ ರಫೀಕ್ ಖಾನ್ ಮತ್ತು ಅಂಕುಶ ನಾಯಕ ಅವರ ಸಿತಾರ್ ಜುಗಲ್ ಬಂದಿ ನಡೆಯಲಿದ್ದು, ನಂತರ ನಡೆಯುವ ಪಂ.ವೆಂಕಟೇಶ ಕುಮಾರ ಅವರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಹಾರ್ಮೋನಿಯಂನಲ್ಲಿ ನರೇಂದ್ರ ನಾಯಕ, ತಬಲಾದಲ್ಲಿ ವಿಘ್ನೇಶ ಕಾಮತ್, ಕೇಶವ ಜೋಶಿ, ಹೇಮಂತ ಜೋಶಿ ಸಾಥ್ ನೀಡಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಅಶೋಕ ಹೆಗಡೆ, ಲಯನ್ ಶಿಕ್ಷಣ ಸಂಸ್ಥೆಯ ಉಪಸಮಿತಿ ಅಧ್ಯಕ್ಷ ಲ. ಕೆ.ಬಿ.ಲೋಕೇಶ ಹೆಗಡೆ ಇದ್ದರು.
ಲಯನ್ಸ್ ಕ್ಲಬ್ ಶಿರಸಿ ಘಟಕವು ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡಿದೆ. ಅದರ ಪರಿಣಾಮವೇ ಜನರು ನಮ್ಮ ಮೇಲೆ ಇಟ್ಟ ವಿಶ್ವಾಸ ಹೆಚ್ಚುತ್ತಿದೆ. ಸಾಮಾಜಿಕ ಬದ್ಧತೆ ನಮ್ಮ ಯಾವತ್ತಿನ ಆದ್ಯತೆ. ಗುಣಮಟ್ಟದ ಜೊತೆಗೆ ಸಂಸ್ಕಾರಯುತ ಶಿಕ್ಷಣ ಇಲ್ಲಿನ ಪ್ರಾಧಾನ್ಯತೆ.
- ಲ. ಅಶೋಕ್ ಹೆಗಡೆ, ಲಯನ್ಸ್ ಕ್ಲಬ್, ಅಧ್ಯಕ್ಷರು