ಯಲ್ಲಾಪುರ: ಉತ್ತಮ, ಜನೋಪಯೋಗಿ ಕಾರ್ಯಗಳ ಮೂಲಕ ಸಾರ್ವಜನಿಕರ ಮತ್ತು ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಯಲ್ಲಾಪುರದ ಯು.ಕೆ.ಸೌಹಾರ್ದ ಕ್ರೆಡಿಟ್ ಸಹಕಾರಿ ಸೊಸೈಟಿಯು ಬೆಳ್ಳಿಹಬ್ಬದ ಹೊಸ್ತಿಲಲ್ಲಿದೆ. ಈ ಸಂದರ್ಭದಲ್ಲಿ ಅಪರೂಪದ, ಅವಿಸ್ಮರಣೀಯ ಕಾರ್ಯಕ್ರಮಗಳನ್ನು ಆಯೋಜಿಸಲು ಆಡಳಿತ ಮಂಡಳಿ ನಿರ್ಣಯಿಸಿದೆ ಎಂದು ಸಂಘದ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ಮೇ.8ಕ್ಕೆ ಪಟ್ಟಣದ ಸಂಘದ ಪ್ರಧಾನ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಸಂಘದ ಪ್ರಗತಿಯ ಮಾಹಿತಿ ನೀಡುತ್ತಿದ್ದರು. ಕೇವಲ 3 ಲಕ್ಷ ರೂ. ಠೇವಣಿಯೊಂದಿಗೆ ಆರಂಭವಾದ ನಮ್ಮ ಸಂಸ್ಥೆ ಗುಳ್ಳಾಪುರ, ಗೋಕರ್ಣ, ಕುಮಟಾ, ಶಿರಸಿ, ಸಿದ್ದಾಪುರ, ದಾಂಡೇಲಿ, ಹೊನ್ನಾವರ, ಮುಂಡಗೋಡು, ಕುಮಟಾ (ಮಹಿಳಾ ಶಾಖೆ)ಗಳಲ್ಲಿ ಶಾಖಾ ಕಚೇರಿಗಳನ್ನು ಹೊಂದಿದ್ದು, ಅನೇಕ ಶಾಖೆಗಳಲ್ಲಿ ಇ-ಸ್ಟಾಂಪಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಹಕರ ಸಹಕಾರದಿಂದ ಬೆಳೆದಿರುವ ಸಂಘವು 107 ಕೋಟಿ ರೂ. ಸಾಲ ನೀಡಲು ಸಮರ್ಥವಾಗಿದೆ ಎಂಬ ಹೆಮ್ಮೆ ನಮ್ಮದಾಗಿದೆ ಎಂದು ಹೇಳಿದರು.
2023-24 ನೇ ಸಾಲಿನಲ್ಲಿ ಸಂಘದ ಒಟ್ಟಾರೆ ವ್ಯವಹಾರ 1,328.46 ಕೋಟಿಯಾಗಿದ್ದು, ದುಡಿಯುವ ಬಂಡವಾಳ 151 ಕೋಟಿಯಷ್ಟಾಗಿದೆ. ಮುಂದಿನ 5 ವರ್ಷಗಳಲ್ಲಿ ನಾವು ಕನಿಷ್ಟ 500 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಿದ್ದು, 400 ಕೋಟಿಗಿಂತಲೂ ಹೆಚ್ಚು ಸಾಲ ನೀಡಲು ಚಿಂತನೆ ಮಾಡಿದ್ದೇವೆ ಎಂದರು.
ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ 6.72 ಕೋಟಿ ಶೇರು ಬಂಡವಾಳವನ್ನು ಹೊಂದಿರುವ ಸಂಘವು, ಪ್ರಸ್ತುತ 19,968 ಶೇರು ಸದಸ್ಯರನ್ನು ಹೊಂದಿದೆ. 9.16 ಕೋಟಿ ನಿಧಿ : 131.10 ಕೋಟಿ ಠೇವಣಿ ಹೊಂದಿರುವ ಸಂಘವು, 1.48 ಕೋಟಿ ರೂ. ವ್ಯಾವಹಾರಿಕ ಲಾಭವನ್ನು ಮತ್ತು 1.09 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದೆ ಎಂದು ಅಂಕಿ-ಅಂಶ ನೀಡಿದರು.
ವಿವಿಧ ನಿಧಿಗಳಿಗಾಗಿ ಕಾದಿಟ್ಟ ನಿಧಿ 1,66,32,235 ರೂ., ಕರಡು ಸಾಲದ ನಿಧಿ 4,48,84,217 ರೂ; ಕಟ್ಟಡ ನಿಧಿ 92,10,500; ಸಾಮಾನ್ಯ ಕ್ಷೇಮ ನಿಧಿ 23,72,159; ಅನಿರೀಕ್ಷಿತ ನಷ್ಟನಿಧಿ 1,37,08,951; ನೌಕರರ ಗ್ರಾಚ್ಯುಟಿ ನಿಧಿ 30,29,042; ಧರ್ಮಾರ್ಥ ನಿಧಿ, ಪ್ರಚಾರ ನಿಧಿ 10,656; ಡಿವಿಡೆಂಡ್ ಸ್ಥಿರೀಕರಣ ನಿಧಿ 1,01,496; ಬೆಳ್ಳಿ ಹಬ್ಬದ ನಿಧಿ 15,00,000; ಶಿರಸಿಯ ಕೆಡಿಸಿಸಿ ಬ್ಯಾಂಕ್ ಪ್ರಶಸ್ತಿ 10,002; ನೌಕರರ ಕಲ್ಯಾಣ ನಿಧಿ 1,50,000 ರೂ.ಗಳನ್ನು ಇರಿಸಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಲಹೆಗಾರ ಪಿ.ಜಿ.ಹೆಗಡೆ ಕಳಚೆ, ಉಪಾಧ್ಯಕ್ಷ ಸುಬ್ಬಯ್ಯ ಧೋಗಳೆ, ನಿರ್ದೇಶಕರಾದ ಸದಾನಂದ ಭಟ್ಟ ಹಳವಳ್ಳಿ, ನಾಗೇಂದ್ರ ಭಟ್ಟ ಕದ್ದಾಳೆ, ಎಂ.ಡಿ.ಮುಲ್ಲಾ, ಮುಖ್ಯ ಕಾರ್ಯನಿರ್ವಾಹಕ ಎನ್ .ಜಿ.ಕಿರಣ, ಸಹಾಯಕ ಕಾರ್ಯನಿರ್ವಾಹಕ ಸುಬ್ರಹ್ಮಣ್ಯ ಭಟ್ಟ ಮತ್ತಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು.