ಯಲ್ಲಾಪುರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಶಾಸಕ ಶಿವರಾಮ ಹೆಬ್ಬಾರ್ ತಾಲೂಕಿನ ಇಡಗುಂದಿ ಗ್ರಾ.ಪಂ ವ್ಯಾಪ್ತಿಯ ಅರಬೈಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಬಳಿಕ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಶಾಂತಿಯುತವಾಗಿ ಮತದಾನ ನಡೆದಿರುವುದು ಸಂತಸದ ಸಂಗತಿಯಾಗಿದೆ. ಜಾತಿ, ಧರ್ಮ, ಭಿನ್ನಾಭಿಪ್ರಾಯಗಳ ಹೊರತಾಗಿ ರಾಜ್ಯದ ಜನತೆ ಸಾಂಘಿಕವಾದ ಚುನಾವಣೆ ನಡೆಯಲು ನಿರ್ಣಯಿಸಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಮನವಿ ಮಾಡಬಯಸುವುದೇನೆಂದರೆ, 3 ತಿಂಗಳುಗಳ ಸುದೀರ್ಘ ನೀತಿ ಸಂಹಿತೆ ಜಾರಿಯು ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿದೆ. ಕರಾವಳಿ ಮಲೆನಾಡು ಪ್ರದೇಶದಲ್ಲಿ 5 ತಿಂಗಳುಗಳ ಕಾಲ ವ್ಯಾಪಕ ಮಳೆಯಾಗುವುದರಿಂದ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲಿ ಇಂದಿಗೆ ಚುನಾವಣೆ ಪೂರ್ಣಗೊಳ್ಳುವುದರಿಂದ, ಈ ಸಂದರ್ಭವನ್ನು ಪರಿಗಣಿಸಿ ನೀತಿ ಸಂಹಿತೆಯನ್ನು ಸಡಿಲಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅನುವು ಮಾಡಿಕೊಡಬೇಕಿದೆ ಎಂದರು.