ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ, ಜಿಲ್ಲೆಯಲ್ಲಿ ಈಗಾಗಲೇ ತೆರೆಯಲಾಗಿರುವ ಚೆಕ್ ಪೋಸ್ಟ್ ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು , ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ತಪಾಸಣೆ ಕಾರ್ಯವನ್ನು ನಡೆಸುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ , ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಹಲವು ಚೆಕ್ ಪೋಸ್ಟ್ ಗಳಿಗೆ ಈಗಾಗಲೇ ಭೇಟಿ ನಿಡಿದ್ದು, ಎಲ್ಲಡೆ ಸಿಬ್ಬಂದಿಗಳು ಕಾರ್ಯನಿರ್ವಹಿಸುವುದು ಕಂಡು ಬಂದಿದೆ ಆದರೆ ಬಿಗಿಯಾದ ತಪಾಸಣೆ ನಡೆಸದೇ ಇರುವುದು ಕಂಡು ಬಂದಿದ್ದು, ಈ ಬಗ್ಗೆ ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಚೆಕ್ ಪೋಸ್ಟ್ ಗಳಲ್ಲಿ ಒಂದೇ ಬಾರಿಗೆ 2 ಅಥವಾ 3 ವಾಹನಗಳು ಬಂದಲ್ಲಿ ಸಂಚಾರ ದಟ್ಟಣೆ ಆಗುತ್ತದೆ ಎಂದು ಒಂದು ವಾಹನ ಮಾತ್ರ ತಪಾಸಣೆ ನಡೆಸಲಾಗುತ್ತಿದೆ ಇದು ಸರಿಯಾದ ಕ್ರಮವಲ್ಲ ,ಚೆಕ್ ಪೋಸ್ಟ್ ಮೂಲಕ ಹಾದು ಹೋಗುವ ಪ್ರತಿಯೊಂದು ವಾಹನಗಳನ್ನು ಕಡ್ಡಾಯವಾಗಿ ಕೂಲಂಕುಷವಾಗಿ ತಪಾಸಣೆ ನಡೆಸಬೇಕು ಎಂದರು.
ಚೆಕ್ ಪೋಸ್ಟ್ ಗಳ ಮೂಲಕ ಹಾದು ಹೋಗುವ ಬೈಕ್ ಸವಾರರನ್ನು ತಪಾಸಣೆ ಮಾಡದೇ ಇರುವುದು ಕಂಡು ಬಂದಿದ್ದು, ಬೈಕ್ ಗಳ ಮೂಲಕ ಸಂಚರಿಸುವವರು ಸುಲಭವಾಗಿ ನಿಗಧಿತ ಮಿತಿಗಿಂತ ಹೆಚ್ಚಿನ ಹಣವನ್ನು ಸಾಗಾಟ ಮಾಡಬಹುದಾಗಿದ್ದು ಈ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಚೆಕ್ ಪೋಸ್ಟ್ ಮೂಲಕ ಸಂಚರಿಸುವ ಸಾರ್ವಜನಿಕ ಬಸ್ ಗಳಲ್ಲಿ ಕೂಡಾ ವ್ಯಾಪಕವಾಗಿ ತಪಾಸಣೆ ಕಾರ್ಯವನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಜಿಲ್ಲೆಯ ಲೋಕಸಭಾ ವ್ಯಾಪ್ತಿಯಲ್ಲಿನ , ಎಲ್ಲಾ ವಿಧಾನಸಭಾ ವ್ಯಾಪ್ತಿಯಲ್ಲಿ ಹಿರಿಯ ನಾಗರೀಕರು ಮತ್ತು ವಿಕಲಚೇತನ ಮತದಾರರಿಗೆ ಹಾಗೂ ಅವಶ್ಯಕ ಸೇವೆಗಳಲ್ಲಿ ಕಾರ್ಯನಿವಿರ್ವಹಿಸುವ ಸಿಬ್ಬಂದಿಗಳಿಗೆ ಅಂಚೆ ಮತಪತ್ರ ಸೌಲಭ್ಯದ ಫಾರಂ ಗಳನ್ನು ವಿತರಿಸುವ ಕಾರ್ಯವನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಈ ಕಾರ್ಯದಲ್ಲಿ ಯಾವುದೇ ಗೊಂದಲಗಳಾಗದಂತೆ ಎಚ್ಚರಿಕೆ ವಹಿಸಿ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಾಜಪೂತ್, ಉಪ ವಿಭಾಗಾಧಿಕಾರಿ ಕನಿಷ್ಠ ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.