ಹೊನ್ನಾವರ: ತಾಲೂಕಿನ ಕಾಸರಕೋಡ ಟೊಂಕದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಕೂಡಲೇ ಕೈಬಿಡಬೇಕು ಹಾಗೂ ಸ್ಥಳೀಯ ಮೀನುಗಾರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕೆಂದು ಮೀನುಗಾರರು ಸಭೆ ಸೇರಿ ಒತ್ತಾಯಪಡಿಸಿದ್ದಾರೆ.
ಇಲ್ಲಿನ ಕಾಸರಕೋಡಿನಲ್ಲಿ ಸಭೆ ಸೇರಿದ ವಿವಿಧ ಸಮಾಜಗಳ ಮುಖಂಡರು ಹಾಗೂ ಮೀನುಗಾರ ಸಂಘಟನೆಗಳ ಪ್ರಮುಖರ ಉಪಸ್ಥಿತಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮೀನುಗಾರರು ಈ ಬಗ್ಗೆ ಒಮ್ಮತದ ನಿರ್ಣಯವೊಂದನ್ನು ಕೈಗೊಂಡಿದ್ದು ಮೀನುಗಾರಿಕೆ ಮತ್ತು ಬಂದರು ಒಳನಾಡು ಜಲ ಸಾರಿಗೆ ಸಚಿವ ಮಂಕಾಳು ವೈದ್ಯರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಲ್ಲಿ ನಿಯೋಗವೊಂದನ್ನು ಕೊಂಡೊಯ್ದು ತಮ್ಮ ಬೇಡಿಕೆಗಳ ಬಗ್ಗೆ ಇನ್ನೊಮ್ಮೆ ಸರ್ಕಾರದ ಗಮನಸೆಳೆಯಬೇಕು. ಒಂದು ವೇಳೆ ಸರ್ಕಾರ ಮೀನುಗಾರರ ಪ್ರಮುಖರೊಂದಿಗೆ ಮಾತುಕತೆ ನಡೆಸಿ ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಈ ಭಾಗದ ಮೀನುಗಾರರು ಲೋಕಸಭಾ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸುವ ಬಗ್ಗೆ ಮತ್ತು ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲು ಪದಾಧಿಕಾರಿಗಳಿಗೆ ಸೂಚಿಸಿ ಮೀನುಗಾರರ ಸಭೆ ಸರ್ವಾನುಮತದಿಂದ ತೀರ್ಮಾನಿಸಿದೆ ಎಂದು ಮೀನುಗಾರರ ಪ್ರಮುಖರಾದ ರಾಜೇಶ ತಾಂಡೇಲ ಮತ್ತು ಹಮಜಾ ಪಟೇಲ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಜನವರಿ 31ರಂದು ಮೀನುಗಾರರ ಮೇಲೆ ನಡೆದ ಪೋಲೀಸ್ ಬಲಪ್ರಯೋಗವನ್ನು ಹಾಗೂ ಮೀನುಗಾರರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಮತ್ತು ಮೀನುಗಾರ ಪ್ರಮುಖರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಿದ ಸ್ಥಳೀಯ ಆಡಳಿತದ ಕ್ರಮವನ್ನು ಖಂಡಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದಿದ್ದಾರೆ. ಮೀನುಗಾರಿಕೆಯು ಪ್ರಮುಖ ಉದ್ಯಮವಾಗಿ ಬೆಳೆದು ನಿಂತಿರುವ ಜಿಲ್ಲೆಯ ಕರಾವಳಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ವಾಣಿಜ್ಯ ಬಂದರುಗಳನ್ನು ನಿರ್ಮಿಸುವುದು, ಮೀನುಗಾರಿಕೆ ಮತ್ತು ಪರಿಸರದ ಹಿತದೃಷ್ಟಿಯಿಂದ ಅಪಾಯಕಾರಿ ಮತ್ತು ಅವೈಜ್ಞಾನಿಕವೆನ್ನುವುದಾಗಿ ಸಭೆ ಅಭಿಪ್ರಾಯಪಟ್ಟಿದೆ. ಮೀನುಗಾರಿಕೆಗೆ ಪ್ರಶಸ್ತವಾಗಿರುವ ಕಡೆ,ಆರ್ಥಿಕ ಪ್ರಗತಿಯ ನೆಪದಲ್ಲಿ ಅಗತ್ಯಕ್ಕಿಂತ ಹೆಚ್ಚು ವಾಣಿಜ್ಯ ಬಂದರುಗಳನ್ನು ನಿರ್ಮಿಸುವುದು ಮೀನುಗಾರರ ಬದುಕಿಗೆ ಕೊಳ್ಳಿ ಇಡುವುದಾಗಿದೆ.
ಜಿಲ್ಲೆಯ ಕಾರವಾರ ಅಂಕೋಲಾ ನಡುವಿನ ಕಡಲತೀರವು ಈಗಾಗಲೇ ಸೀಬರ್ಡ ನೌಕಾನೆಲೆಗೆ ಮೀಸಲಾಗಿರುವುದು. ಬೇಲೇಕೇರಿ,ಮತ್ತು ಕಾರವಾರದಲ್ಲಿ 2ವಾಣಿಜ್ಯ ಬಂದರುಗಳು ಈಗಾಗಲೇ ಕಾರ್ಯಾಚರಿಸುತ್ತಿರುವುದು ಮತ್ತು ಈ ನಡುವೆ ಹೊನ್ನಾವರದ ಪಾವಿನಕುರ್ವೆ ಮತ್ತು ಅಂಕೋಲಾದ ಖೇಣಿಯಲ್ಲಿ ಇನ್ನೆರಡು ವಾಣಿಜ್ಯ ಬಂದರುಗಳ ನಿರ್ಮಾಣಕ್ಕೆ ಸರಕಾರದಿಂದ ಸಿದ್ಧತೆ ನಡೆದಿರುವಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದು ಜಿಲ್ಲೆಯಲ್ಲಿ ಮೀನುಗಾರಿಕೆಗೆ ಪ್ರಶಸ್ತವಾಗಿರುವ ಕರಾವಳಿ ತೀರಗಳನ್ನು ವಾಣಿಜ್ಯ ಬಂದರು ನಿರ್ಮಾಣಕ್ಕೆ ಬಳಸುವ ದೂರದೃಷ್ಟಿ ಇಲ್ಲದ ಸರ್ಕಾರದ ಅವೈಜ್ಞಾನಿಕ ಕ್ರಮಕ್ಕೆ ಸಭೆ ತನ್ನ ಕಳವಳವನ್ನು ವ್ಯಕ್ತಪಡಿಸಿದೆ.
ನಮ್ಮ ಮೀನುಗಾರಿಕೆ ಸಚಿವ ಮಂಕಾಳ ವೈದ್ಯರು, ಮೀನುಗಾರರ ಹಿತರಕ್ಷಣೆಯೇ ತಮ್ಮ ಮೊದಲ ಆದ್ಯತೆ ಎಂದಿದ್ದಾರೆ. ಉದ್ದೇಶಿತ ಬಂದರು ಯೋಜನೆಗೆ ಕಾಸರಕೋಡ ಕಡಲತೀರದಲ್ಲಿ ಚತುಷ್ಪಥ ರಸ್ತೆ ಮತ್ತು ರೈಲು ಮಾರ್ಗ ನಿರ್ಮಾಣದಿಂದ 200ಕ್ಕೂ ಹೆಚ್ಚು ಮೀನುಗಾರರ ಮನೆಗಳಿಗೆ ತೊಂದರೆ ಆಗುವ ಬಗ್ಗೆ ಮತ್ತು ಒಣ ಮೀನಿನ ಉದ್ಯಮಕ್ಕೆ ಭಾರಿ ಹಿನ್ನಡೆ ಉಂಟಾಗಿರುವ ವಿಚಾರ ಸಚಿವರಿಗೆ ಮನವರಿಕೆಯಾಗಿದೆ. ಈ ಹಂತದಲ್ಲಿ ಯೋಜನೆಯನ್ನು ಕೈ ಬಿಡುವ ಬಗ್ಗೆ ಪರಿಶೀಲನೆ ನಡೆಸಲು ವಿವಿಧ ಆಯಾಮಗಳಲ್ಲಿ ಸುಧೀರ್ಘವಾಗಿ ಚರ್ಚೆ ನಡೆಸಬೇಕಾಗುತ್ತದೆ. ಕಾನೂನು ಇಲಾಖೆಯ ಅಭಿಪ್ರಾಯ ಪಡೆಯಬೇಕಾಗುತ್ತದೆ. ಯೋಜನೆಯಿಂದ ಜನರಿಗೆ, ಪರಿಸರಕ್ಕೆ ಮತ್ತು ವಿಶೇಷವಾಗಿ ಮೀನುಗಾರಿಕೆಗೆ ಆಗುವ ತೊಂದರೆಗಳ ಬಗ್ಗೆ ಪುರಾವೆ ಸಹಿತ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಅವರನ್ನು ಒಪ್ಪಿಸಿ ಸಚಿವ ಸಂಪುಟದಲ್ಲಿ ಸೂಕ್ತ ತಿರ್ಮಾನ ಕೈಗೊಳ್ಳಬೇಕಾಗುತ್ತದೆ.ಈ ಹಿನ್ನೆಲೆಯಲ್ಲಿ ಒಮ್ಮೆ ಹೈಟೈಡಲೈನ ಮತ್ತು ಸಿಆರ್ಝೆಡ್ ಸರ್ವೆ ಆಗಲಿ ಎಂದಿದ್ದೆ. ಆದರೆ ಬಂದರು ಯೋಜನೆಯೇ ಬೇಡವೆಂದಾದರೆ ಇನ್ನು ಸರ್ವೆ ಯಾಕೆ ಬೇಕು? ಎನ್ನುವ ನಿಲುವಿಗೆ ಬಂದ ಮೀನುಗಾರರು ಸರ್ವೆ ನಡೆಸುವದನ್ನು ವಿರೋಧಿಸಿ ಪ್ರತಿಭಟಿಸಿದ್ದರಿಂದ ಕೆಲವು ಬೆಳವಣಿಗೆಗಳು ಆಗಿದೆ ಎಂದು ಇತ್ತೀಚೆಗೆ ತಮ್ಮನ್ನು ಭೇಟಿ ಮಾಡಿದ ಮೀನುಗಾರ ಪ್ರಮುಖರಿಗೆ ಸಚಿವ ಮಂಕಾಳು ವೈದ್ಯ ಅವರು ಸ್ಪಷ್ಟ ಪಡಿಸಿದ್ದು, ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ನಿರ್ಧರಿಸಲಾಗುವುದು ಎಂದಿದ್ದಾರೆ.
ಸಭೆಯ ವೇದಿಕೆಯಲ್ಲಿ ರಾಜೇಶ್ ತಾಂಡೇಲ್ ಟೊಂಕ, ಹಮಜಾ ಸಾಬ ಟೊಂಕ ಮಾಮು ಸಾಬ ಟೊಂಕ, ಗಜಾನನ ತಾಂಡೇಲ ರಾಮನಗರ, ಹನುಮಂತ ತಾಂಡೇಲ್, ಜಗದೀಶ್ ತಾಂಡೇಲ್, ಭಾಷಾ ಪಟೇಲ್, ಗಣಪತಿ ತಾಂಡೇಲ, ಸ್ಟೀವನ್ ಫರ್ನಾಂಡಿಸ್ ಪೀಟರ್ ಪರ್ನಾಡಿಸ್ ಟೊಂಕ ವಿವಿಧ ಸಂಘ ಸಂಸ್ಥೆಯ ಮುಖ್ಯಸ್ಥರು ಹಾಗೂ ವಾಡೆಯ ಪ್ರಮುಖರು ಉಪಸ್ಥಿತರಿದ್ದರು.