ಹೊನ್ನಾವರ : ಮನೆಯ ಅಂಗಳದಲ್ಲಿ ರಂಗೋಲಿ ಹಾಕುವ ಹೆಣ್ಣು ಇಂದು ಮಂಗಳನ ಅಂಗಳಕ್ಕೆ ರಂಗೋಲಿ ಹಾಕಲು ಸಮಯ ಕಾಯುತ್ತಿರುತ್ತಾಳೆ. ಎಲ್ಲಾ ಹೋರಾಟಗಳಲ್ಲಿಯೂ, ತ್ಯಾಗಗಳಲ್ಲಿಯೂ ಮಹಿಳೆಯರ ದೊಡ್ಡ ಪ್ರಮಾಣದ ಕೊಡುಗೆಗಳಿವೆ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಸಾಧನಾ ಬರ್ಗಿ ಹೇಳಿದರು.
ಅವರು ಓಂಕಾರ ಸಂಜೀವಿನಿ ಒಕ್ಕೂಟ ಹಾಗೂ ಗ್ರಾಮ ಪಂಚಾಯಿತ ಉಪ್ಪೋಣಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆ ಲೆಕ್ಕವಿಲ್ಲದಷ್ಟು ವಿವಿಧ ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸಿ ತಾನು ಸಬಲಳು ಎಂದು ಸಾಬಿತು ಪಡಿಸಿದ್ದಾಳೆ. ಹೆಣ್ಣು ಭ್ರೂಣಹತ್ಯೆ ನಿಂತು ಸ್ತ್ರೀ ಸಂಖ್ಯೆ ಹೆಚ್ಚಾಗಬೇಕೆಂದು ಕರೆ ನೀಡಿದರು.
ಮುಖ್ಯ ಅಥಿತಿಯಾದ ಬ್ರಹ್ಮಕುಮಾರಿ ಕುಸುಮಾ ತಮ್ಮ ಮಾತಿನಲ್ಲಿ ಮಹಿಳೆಯರು ಎದುರಿಸುತ್ತಿರುವ ಅಸಮಾನತೆ ನಿವಾರಣೆಯಾಗಬೇಕು ಸಮಾನತೆ ಸಿಗಬೇಕು ಎಂದು ನುಡಿದರು.
ಗ್ರಾಮ ಪಂಚಾಯತ ಅಧ್ಯಕ್ಷರಾದ ಗಣೇಶ್ ನಾಯ್ಕ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಿದರು. ಗ್ರಾಮ ಪಂಚಾಯತ್ ಸದಸ್ಯರಾದ ಜಯಶ್ರೀ ಗಾಬಿತ, ಪಿ.ಡಿ.ಓ ರಾಘವೇಂದ್ರ ಮೇಸ್ತ.ಹಾಗೂ ವಕೀಲೆ ಶ್ವೇತಾ, ಅಕ್ಷತಾ ,ಒಕ್ಕೂಟದ ಅಧ್ಯಕ್ಷೆಯಾದ ನೂರಜಾನ್,ನಾಗವೇಣಿ ಪಟಗಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನಿಸಲಾಯಿತು. ಸುಮಾ ಗೌಡ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಜಯಂತಿ ವಂದಿಸಿದರು.