Slide
Slide
Slide
previous arrow
next arrow

‘ಚಂದ್ರಹಾಸ ಹುಡಗೋಡು ಯಕ್ಷಗಾನದ ಮೌಲ್ಯ ಕಾಯ್ದುಕೊಂಡ ಕಲಾವಿದ’

300x250 AD

ಯಕ್ಷಗಾನದ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಕಿರಿಯ ಅವಧಿಯಲ್ಲಿಯೇ ಹಿರಿಯ ಪ್ರೌಢಿಮೆ ಸಾಧಿಸಿ ತೋರಿಸಿ ಯಕೈಕ್ಯರಾದ ಚಂದ್ರಹಾಸ ಹುಡಗೋಡು ಕಲಾಭಿಮಾನಿಗಳ ಹೃದಯ ರಂಗಸ್ಥಳದಲ್ಲಿ ಈಗಲೂ ಕುಣಿಯುತ್ತಿದ್ದಾರೆ. ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳಲ್ಲಿರುವ ಜೀವನ ಮೌಲ್ಯಗಳನ್ನು ಯಕ್ಷಗಾನದ ಮೂಲಕ ಜನಮಾನಸಕ್ಕೆ ಬಿತ್ತಿದ ಮೇರು ಕಲಾವಿದರ ಸಾಲಿನಲ್ಲಿ ಚಂದ್ರಹಾಸ ಹುಡಗೋಡು ಸೇರುತ್ತಾರೆ ಎಂದು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ವಿಶ್ವವಿದ್ಯಾಲಯ ವಿಭಾಗ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಚೆನ್ನೈನ ಕುಲಸಚಿವ ಡಾ.ಮಂಜುನಾಥ ಅಂಬಿಗ ಅಭಿಪ್ರಾಯ ಪಟ್ಟರು.

ಕಲಾಶ್ರೀ ಯಕ್ಷಮಿತ್ರ ಮಂಡಳಿ (ರಿ.) ಹುಡಗೋಡ ಇವರು ಹೊನ್ನಾವರದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಯಕ್ಷೈಕ್ಯ ಚಂದ್ರಹಾಸ ಹುಡಗೋಡು ಇವರ 5ನೇ ವರ್ಷದ ಸಂಸ್ಮರಣೆ, ಕಲಾಶ್ರೀ ಪ್ರಶಸ್ತಿ ಪ್ರಧಾನ ಹಾಗೂ ಗೌರವ ನಿಧಿ ಸಮರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಹುಡಗೋಡ ಅವರ ಮಕ್ಕಳು ಹಾಗೂ ಅಭಿಮಾನಿಗಳು ಇಂತಹ ಸ್ತುತ್ಯಾರ್ಹ ಕಾರ್ಯಕ್ರಮ ನಡೆಸುವ ಮೂಲಕ ಅವರ ಕೊಡುಗೆ ಮತ್ತು ಸಾಧನೆಯನ್ನು ಸದಾ ಹಸಿರಾಗಿಡುತ್ತಿರುವುದು ಇತರರಿಗೂ ಮಾದರಿಯಾಗಲಿ ಎಂದರು. ಯಕ್ಷಗಾನದ ಮೌಲ್ಯ ಕಾಯ್ದುಕೊಂಡು ಬಂದ ಇಂತಹ ಕಲಾವಿದರು ಸಾಂಸ್ಕೃತಿಕ ಕಲೆಗೆ ದೊಡ್ಡ ಆಸ್ತಿಯೆಂದರು.

300x250 AD

ಅಧ್ಯಕ್ಷತೆವಹಿಸಿದ್ದ ಹಿರಿಯ ಸಾಹಿತಿಗಳಾದ ಸುಮುಖಾನಂದ ಜಲವಳ್ಳಿ, ಹುಡುಗೋಡು ಅವರ ಪರಿಚಯ ಆತ್ಮೀಯತೆಗೆ ತಿರುಗಿ ಅವರ ಸಾಕಷ್ಟು ಪಾತ್ರಗಳನ್ನು ನೋಡುವ ಮೂಲಕ ಅವರ ಅಪಾರ ಅಭಿಮಾನಿ ಬಳಗದಲ್ಲಿ ನಾನು ಒಬ್ಬನಾಗಿದ್ದೇನೆ ಎಂದರು. ಯಕ್ಷಗಾನ ಕ್ಷೇತ್ರದಲ್ಲಿ ಅನೇಕ ಹಿರಿಯ ನಾಮಾಂಕಿತ ಕಲಾವಿದರು ತಮ್ಮದೇ ಆದ ಕೊಡುಗೆ ನೀಡಿ ಹೆಜ್ಜೆಗುರುತನ್ನು ಮೂಡಿಸಿದ್ದಾರೆ. ಅದರಂತೆ ಹುಡುಗೋಡವರು ಸಹ ಮೂಡಿಸಿದ ಹೆಜ್ಜೆ ಗುರುತು ಹೆಗ್ಗುರುತಾಗಿ ಸದಾ ನೆನಪಿನಲ್ಲುಳಿಯುತ್ತದೆಂದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಖ್ಯಾತ ಹಾಸ್ಯ ಕಲಾವಿದ ಶ್ರೀಧರ ಹೆಗಡೆ ಚಪ್ಪರಮನೆ ಇಂದಿನ ಹೊಸ ಹೊಸ ಪ್ರಯೋಗಗಳ, ಸಾಮಾಜಿಕ ಯಕ್ಷಗಾನಗಳ ಸೆಳೆತಕ್ಕೆ ಒಳಗಾಗದೆ ಪೌರಾಣಿಕ ಪ್ರಜ್ಞೆಯೊಂದಿಗೆ ಪಾತ್ರ ನಿರ್ವಹಿಸಿದ್ದ ಹುಡಗೋಡವರ ಹೆಸರಿನಲ್ಲಿ ನನಗೆ ನೀಡಿದ ಪ್ರಶಸ್ತಿ ಧನ್ಯತೆ ತಂದಿದೆ ಎನ್ನುತ್ತಾ ಕಲಾಶ್ರೀ ಬಳಗವನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಶ್ರೀಕುಮಾರ ಸಾರಿಗೆ ಸಂಸ್ಥೆ ಮಾಲೀಕರಾದ ವೆಂಕಟ್ರಮಣ ಹೆಗಡೆ ಚಂದ್ರಹಾಸ ಮತ್ತೆ ತನ್ನ ಜೊತೆಗಿನ ಸಾಮಾಜಿಕ ಮತ್ತು ಆತ್ಮೀಯ ಸಂಬಂಧವನ್ನು ತೆರೆದಿಟ್ಟರು. ಖ್ಯಾತ ವಕೀಲರಾದ ವಿಕ್ರಮ ನಾಯ್ಕ ಮಾತನಾಡಿ ಹುಡಗೋಡವರ ಯಕ್ಷಗಾನೀಯ ಬದ್ಧತೆಯಂತೆ ಸಾಮಾಜಿಕ ಮತ್ತು ರಾಜಕೀಯ ಬದ್ಧತೆಯು ಅಷ್ಟೇ ಗಟ್ಟಿತನವನ್ನು ಹೊಂದಿತ್ತೆಂದರು. ವಿಶ್ರಾಂತ ಉಪನ್ಯಾಶಕ ಕೆ. ವಿ. ಹೆಗಡೆ ಮಾತನಾಡಿ ಚಂದ್ರಹಾಸ ಹುಡುಗೋಡವರು ಯಕ್ಷಗಾನದ ಭಾವಾಭಿನಯಗಳು, ತನ್ನದೇ ಶೈಲಿಯ ಕುಣಿತ ಹಿತಮಿತ ಪ್ರೌಢ ಮಾತುಗಾರಿಕೆಯ ಕಲಾವಿದರಾಗಿದ್ದರು. ಚಿಟ್ಟಾಣಿಯವರಂತೆ ರಂಗಸ್ಥಳದ ಬಿಸಿ ಕಾಯ್ದುಕೊಳ್ಳುವ ಸಾಮರ್ಥ್ಯ ಅವರಿಗಿತ್ತು ಎಂದರು. ನಾಯಕ ಮತ್ತು ಪ್ರತಿನಾಯಕ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿ ಯಕ್ಷಗಾನಕ್ಕೆ ಬೇಕಾದ ಬಹುಬೇಡಿಕೆಯ ಕಲಾವಿದರಾಗಿದ್ದರು ಅಂತೆಯೇ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತನ್ನನ್ನು ತೊಡಡಗಿಸಿಕೊಂಡು ಅನೇಕರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು ಎಂದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಗೋಪಾಲ ಆಚಾರ್ ತೀರ್ಥಹಳ್ಳಿ ಹಾಗೂ ಹಡಿನಬಾಳ ಗ್ರಾ. ಪಂ. ಅಧ್ಯಕ್ಷ ವೆಂಕಟೇಶ ಗೌಡ ಕಾರ್ಯಕ್ರಮಕ್ಕೆ ಶುಭ ಕೋರಿದರು. ಎಮ್.ಆರ್. ನಾಯ್ಕ ಹುಡಗೋಡು ಇವರು ಪ್ರಾಸ್ಥಾವಿಕ ಮಾತುಗಳೊಂದಿಗೆ ಸ್ವಾಗತ ಕೋರಿದರು. ಚಂದ್ರಹಾಸ ಹುಡಗೋಡವರ ಪುತ್ರ ಸುದೀಪ್ ವೇದಿಕೆ ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಸುದೀಶ್ ನಾಯ್ಕ ಸುಂದರವಾಗಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು. ನಂತರ ಅತಿಥಿ ಕಲಾವಿದರ ಕೂಡುವಿಕೆಯಿಂದ ಶ್ಯಮಂತಕ ಮಣಿ ಯಕ್ಷಗಾನ ಪ್ರದರ್ಶನಗೊಂಡಿತು. ಹವ್ಯಾಸಿ ಕಲಾವಿದರಾದ ಹೊನ್ನಾವರದ ಖ್ಯಾತ ವೈದ್ಯ ಡಾ|| ಪ್ರಕಾಶ ನಾಯ್ಕ ಜಾಂಬವಂತನ ಪಾತ್ರ ನಿರ್ವಹಿಸಿ ವೃತ್ತಿ ಕಲಾವಿದರಿಗೆ ಕಡಿಮೆಯಿಲ್ಲದಂತೆ ಭಾವಾಭಿನಯ ನೀಡಿ ಪ್ರೇಕ್ಷಕರ ಮನ ಗೆದ್ದರು. ಒಟ್ಟಾರೆ ಮೂಡಿ ಬಂದ ಸುಂದರ ಪ್ರದರ್ಶನ ಸೇರಿದ ಅಪಾರ ಸಂಖ್ಯೆ ಪ್ರೇಕ್ಷಕರಿಗೆ ಸದಾ ನೆನಪಿಸಿಕೊಳ್ಳಬಹುದಾದ ಕಾರ್ಯಕ್ರಮವಾಗಿ ಮೂಡಿಬಂದಿತು.

Share This
300x250 AD
300x250 AD
300x250 AD
Back to top