ಸಿದ್ದಾಪುರ:ತಾಲೂಕಿನ ಹಾರ್ಸಿಕಟ್ಟಾದ ಗಜಾನನೋತ್ಸವ ಸಮಿತಿಯ ಸಭಾಂಗಣದಲ್ಲಿ ರಂಗ ಸೌಗಂಧ ಸಿದ್ದಾಪುರ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ದಿ.ಹುಲಿಮನೆ ಸೀತಾರಾಮ ಶಾಸ್ತಿç ನೆನಪಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಮೂರುದಿನಗಳ ಗ್ರಾಮೀಣ ರಂಗೋತ್ಸವದ ಸಮಾರೋಪ ಸಮಾರಂಭವು ಯಶಸ್ವಿಯಾಗಿ ನೆರವೇರಿತು.
ಸಮಾರೋಪದಲ್ಲಿ ಭಾಗವಹಿಸಿದ ನಿವೃತ್ತ ಪ್ರಾಚಾರ್ಯ ಪ್ರೊ.ಕೆ.ಎನ್.ಹೊಸ್ಮನಿ ಶಿರಸಿ ಮಾತನಾಡಿ, ಸರ್ವಶ್ರೇಷ್ಠ ನಾಟಕ ಕಲಾವಿದರಾಗಿದ್ದ, ರಂಗಕರ್ಮಿಯಾಗಿದ್ದ, ಶ್ರೇಷ್ಠ ಪರಂಪರೆಯನ್ನು ಉಳಿಸುವುದಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟವರಾಗಿದ್ದ ಹುಲಿಮನೆ ಸೀತಾರಾಮ ಶಾಸ್ತ್ರಿ ಅವರ ನೆನಪು ಅವಿಸ್ಮರಣೀಯ ಎಂದು ಹೇಳಿದರು.
ಅವರು ಬೆಳೆಸಿ, ಉಳಿಸಿಕೊಂಡು ಬಂದ ನಾಟಕ ಪರಂಪರೆಯನ್ನು ರಂಗ ಸೌಗಂಧ ತಂಡ ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ನಾಟಕ ಕೇವಲ ವಿನೋದಕ್ಕಾಗಿ ಅಲ್ಲ. ಅದು ಜೀವನದ ಮಾರ್ಗದರ್ಶನದ ದೀವಿಗೆ. ಬಾಳಿಗೆ ಅಪರೂಪದ ಮಾರ್ಗದರ್ಶನ ನೀಡುವುದಾಗಿದೆ. ಇಂದು ಕಲಾ ಪ್ರಕಾರಗಳು ಉಳಿಯಬೇಕಾಗಿದೆ. ಅದರ ಮಹತ್ವವನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರು.
ಬನವಾಸಿ ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಕೆ.ನಾಯ್ಕ ನಾಟಕ ಜೀವನ ಶಿಕ್ಷಣ ನೀಡುವಂತಹುದಾಗಿದೆ. ಸೀತಾರಾಮ ಶಾಸ್ತ್ರಿ ಅವರು ಅಸಾಮಾನ್ಯ ಕಲಾವಿದರಾಗಿ, ಸಂಘಟಕರಾಗಿ, ಸಂಪ್ರದಾಯದ ಕೊಂಡಿಯಾಗಿದ್ದರು ಎಂದು ಹೇಳಿದರು. ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿ ಕಾರ್ಯದರ್ಶಿ ಅನಂತ ಶಾನಭಾಗ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ ಉಪಸ್ಥಿತರಿದ್ದರು.
ನಂತರ ಮೈಸೂರಿನ ಇಂಡಿಯನ್ ಥೇಟರ್ ಫೌಂಡೇಶನ್ನ ಇವರಿಂದ ಪ್ರಸನ್ನ ರಚನೆಯ ಲಕ್ಕಿ ಗುಪ್ತ ನಿರ್ದೇಶನದ ಕುಪ್ಪಳ್ಳಿ ಪುಟ್ಟ ನಾಟಕವನ್ನು ಸುಪ್ರೀತ್ ಭಾರಧ್ವಾಜ ಹಾಗೂ ರಾಜೇಶ ಮಾಧವನ್ ಪ್ರಸ್ತುತ ಪಡಿಸಿದರು. ರಂಗ ಸೌಗಂಧದ ರಂಗ ನಿರ್ದೇಶಕ ಗಣಪತಿ ಹೆಗಡೆ ಹುಲಿಮನೆ, ಗಣಪತಿ ಗುಂಜಗೋಡು ಕಾರ್ಯಕ್ರಮ ನಿರ್ವಹಿಸಿದರು.