ಮುಂಡಗೋಡು:ಗ್ರಾಮೀಣ ಜನರಿಂದ ಆಯ್ಕೆಯಾದ ಗ್ರಾಮದ ಪ್ರಥಮ ಪ್ರಜೆಗಳಾದ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಗ್ರಾಮೀಣ ಪ್ರದೇಶದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳು ಮತ್ತು ಅವುಗಳ ನಿವಾರಣೆ, ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಹಾಗೂ ಮಹಾತ್ಮ ಗಾಂಧಿ ನರೇಗಾದಡಿ ಸಿಗುವ ಕಾಮಗಾರಿ, ವಿವಿಧ ಸೌಲಭ್ಯಗಳ ಕುರಿತ ಅರಿವು ಕಾರ್ಯಗಾರವು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕು ಪಂಚಾಯತ್ನ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ಯು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕಾಡಳಿತ, ತಾಲ್ಲೂಕು ಪಂಚಾಯತ್, ತಾಲ್ಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಈ ಕಾರ್ಯಗಾರದಲ್ಲಿ ಬಿಹೆಚ್ಇಒ ಎಸ್.ಎಸ್. ಪಟ್ಟಣಶೆಟ್ಟಿ ಅವರು ಮಾತನಾಡಿ, ಪ್ರಸ್ತುತ ಗ್ರಾಮೀಣ ಭಾಗದಲ್ಲಿ ಉಲ್ಬಣಗೊಳ್ಳುತ್ತಿರುವ ಮಂಗನ ಕಾಯಿಲೆ, ಕಾಲರಾ, ಡೆಂಗ್ಯೂ, ಚಿಕನ್ಗುನ್ಯಾ, ರಕ್ತಹೀನತೆ, ಗರ್ಭ, ಸ್ಥನ ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳ ಬಗ್ಗೆ ಪಿಪಿಟಿ ಮೂಲಕ ವಿವಿರಿಸಿದರು. ಈ ಎಲ್ಲ ಕಾಯಿಲೆಗಳಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಉಚಿತವಾಗಿ ಲಭ್ಯವಿದ್ದು, ಪ್ರತಿಯೊಬ್ಬರೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಐಇಸಿ ಸಂಯೋಜಕರಾದ ಫಕ್ಕೀರಪ್ಪ ತುಮ್ಮಣ್ಣನವರ ಮಾತನಾಡಿ, ಗ್ರಾಮ ಪಂಚಾಯತಿ ಜನಪ್ರತಿನಿಧಿಗಳಾದ ತಾವುಗಳೆಲ್ಲ ನರೇಗಾದಡಿ ಲಭ್ಯವಿರುವ 260ಕ್ಕೂ ಅಧಿಕ ಕಾಮಗಾರಿಗಳ ಬಗ್ಗೆ ತಿಳಿದುಕೊಂಡು ಗ್ರಾಮಕ್ಕೆ ಹಾಗೂ ಗ್ರಾಮದ ಜನರಿಗೆ ಪೂರಕವಾಗುವ ಕಾಮಗಾರಿ ಕೈಗೊಳ್ಳಲು ಮುಂದಾಗಬೇಕು. ಜೊತೆಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಲಿಕಾರರಿಗೆ ಲಭ್ಯವಿರುವ ಸೇವೆಗಳ ಸದುಪಯೋಗ ಪಡೆಯುವಂತೆ ತಮ್ಮ ಗ್ರಾಮದ ನರೇಗಾ ಕೂಲಿಕಾರರಿಗೆ ತಿಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಪಂ ವ್ಯವಸ್ಥಾಪಕರು, ಅಧಿಕಾರಿಗಳು, ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.