ಅಂಕೋಲಾ: ಮುಂಬರುವ ಲೋಕಸಭೆಯ ಚುನಾವಣೆಗೆ ಉತ್ತರ ಕನ್ನಡ ಜಿಲ್ಲೆಯಿಂದ ಪಕ್ಷದ ಅಭ್ಯರ್ಥಿ ಯಾರೇ ಆದರೂ ನಮ್ಮ ಆಯ್ಕೆಯ ಗುರಿ ಮಾತ್ರ ಬಿಜೆಪಿಯೇ ಆಗಿರಲಿ ಈ ಮೂಲಕ ಮೋದಿಜಿ ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಲಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ಪಟ್ಟಣದ ವೀರವಿಠ್ಠಲ ಸಭಾಭವನದಲ್ಲಿ ನಡೆದ
ಭಾರತೀಯ ಜನತಾ ಪಕ್ಷದ ಅಂಕೋಲಾ ಮಂಡಲ ಹಾಗೂ ವಿವಿಧ ಮೋರ್ಚಾಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಘನ ಉಪಸ್ಥಿತಿಯಲ್ಲಿ ಮಾತನಾಡಿ ಬಿಜೆಪಿ ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ ಕಾರ್ಯಕರ್ತರಿಗೆ ಒಂದಲ್ಲ ಒಂದು ದಿನ ಸೂಕ್ತವಾದ ಪದವಿ ಹುಡುಕಿಕೊಂಡು ಬರುತ್ತದೆ .ಇದು ಪಕ್ಷದ ಸಿದ್ಧಾಂತ. ಪಕ್ಷದ ಏಳಿಗೆಗಾಗಿ ಸೂಕ್ತ ಕಾರ್ಯಕರ್ತರನ್ನು ಆಯ್ಕೆಮಾಡಿ ಜವಾಬ್ದಾರಿಗಳನ್ನು ನೀಡಲಾಗಿದೆ. ನಮ್ಮ ಪಕ್ಷ ನಮ್ಮ ತಾಯಿ ಇದ್ದಂತೆ. ತಾಯಿಯ ಸೇವೆ ಮಾಡಿದರೆ ಭಾರತ ಮಾತೆಯ ಸೇವೆ ಮಾಡಿದಂತೆ, ದೇಶ ಸೇವೆಗೆ ನಮ್ಮ ಅಳಿಲು ಸೇವೆಯಾಗಿ ಶಕ್ತಿಮೀರಿ ದುಡಿದು ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಬ್ಯರ್ಥಿಯನ್ನು ಗೆಲ್ಲಿಸಿ ಮೋದಿಜಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸೋಣ ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಎಸ್. ಹೆಗಡೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಸಂಜಯ ನಾಯ್ಕ ನೂತನ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಅವರಿಗೆ ಪಕ್ಷದ ಧ್ವಜವನ್ನು ನೀಡಿ ಅಧಿಕಾರ ಹಸ್ತಾಂತರಿಸಿದರು.
ಪಕ್ಷದ ಪ್ರಮುಖರಾದ ಡಾ.ಜಿ.ಜಿ.ಹೆಗಡೆ ಮಾತನಾಡಿ ಅಂಕೋಲಾ ಮಂಡಲ ಜಿಲ್ಲೆಯಲ್ಲಿಯೇ ಉತ್ತಮ ಸಂಘಟನೆ ಹೊಂದಿರುವ ಮಂಡಲ. ಉತ್ತಮ ಕಾರ್ಯಕರ್ತರ ಪಡೆಯನ್ನು ಹೊಂದಿರುವ, ಪಕ್ಷವನ್ನು ಗಟ್ಟಿಯಾಗಿ ನೆಲೆಯೂರಲು ಕಾರಣರಾದ ಪ್ರಮುಖರು ಈ ತಾಲೂಕಿನಲ್ಲಿದ್ದಾರೆ. ಹಿಂದಿನದನ್ನು ಮರೆತು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸಿ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲು ಕೈಜೋಡಿಸೋಣ ಎಂದರು. ಹಿಂದುಳಿದ ವರ್ಗದ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜೇಂದ್ರ ನಾಯ್ಕ ಮಾತನಾಡಿದರು.
ನೂತನ ಅಧ್ಯಕ್ಷರಾದ ಗೋಪಾಲಕೃಷ್ಣ ವೈದ್ಯ ಮಾತನಾಡಿ ಮುಂಬರುವ ದಿನಗಳಲ್ಲಿ ತಮಗೆ ಸಂಪೂರ್ಣ ಸಹಕಾರ ನೀಡುವಂತೆ ಕೋರಿ ಅಂಕೋಲಾ ಮಂಡಲದ ನೂತನ ಪದಾಧಿಕಾರಿಗಳನ್ನು ಘೋಷಿಸಿದರು ಹಾಗೂ ಅವರನ್ನು ವೇದಿಕೆಯಲ್ಲಿ ಪಕ್ಷದ ಶಾಲು ಹೊದಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಸಂಜಯ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾದ್ಯಕ್ಷ ಎನ್.ಎಸ್. ಹೆಗಡೆ, ಜಿಲ್ಲಾ ಸಮಿತಿ ಕಾರ್ಯದರ್ಶಿ ಆರತಿ ಗೌಡ, ಮಾದ್ಯಮ ಸಹ ವಕ್ತಾರ ಜಗದೀಶ ನಾಯಕ ಮೊಗಟಾ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಕಾಂತ ನಾಯ್ಕ, ಶ್ರೀಧರ ನಾಯ್ಕ, ಜಿಲ್ಲಾ ಕಾರ್ಯದರ್ಶಿ ನಿತ್ಯಾನಂದ ಗಾಂವಕರ, ರಾಜ್ಯ ಮೀನುಗಾರ ಮೋರ್ಚಾ ಸದಸ್ಯ ಹುವಾ ಖಂಡೇಕರ ಉಪಸ್ಥಿತರಿದ್ದರು. ಮಾಜಿ ಕಾರ್ಯದರ್ಶಿ ರಾಘು ಭಟ್ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿಯ ಪ್ರಮುಖರು, ಮಹಾಶಕ್ತಿ ಕೇಂದ್ರದ, ಶಕ್ತಿ ಕೇಂದ್ರದ ಪ್ರಮುಖರು, ವಿವಿಧ ಬೂತ್ ಮಟ್ಟದ ಪ್ರಮುಖರು, ಕಾರ್ಯಕರ್ತರು ಇದ್ದರು.