ಸಿದ್ದಾಪುರ: ತಾಲೂಕಿನ ವಾಜಗೋಡು ಗ್ರಾಪಂ ವ್ಯಾಪ್ತಿಯ ಶಿಬಳಮನೆಯಲ್ಲಿ ನೂತನವಾಗಿ ಕಟ್ಟಿಸಿರುವ ಶ್ರೀ ಸಮರ್ಥ ಶ್ರೀಧರ ಕುಟೀರದ ಲೋಕಾರ್ಪಣೆ ಹಾಗೂ ಶ್ರೀ ಆಂಜನೇಯ ದೇವರ ಪ್ರತಿಷ್ಠಾಪನಾ ಕಾರ್ಯಕ್ರಮ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಶ್ರೀ ಸಮರ್ಥ ಶ್ರೀಧರಾಶ್ರಮ ಶ್ರೀ ಸದ್ಗುರು ಪೀಠಂ ಮಹಾಸಂಸ್ಥಾನ ಶ್ರೀ ಸಮರ್ಥ ಶ್ರೀಧರಾಶ್ರಮ ಟ್ರಸ್ಟ್ ಇದರ ಸಂಸ್ಥಾಪಕ ಅಧ್ಯಕ್ಷರಾದ ಕುಂಡಲಿನೀ ಜ್ಞಾನಯೋಗಿ ಶ್ರೀಮದಾತ್ಮಾನಂದ ಸರಸ್ವತೀ ಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಿತು.
ಈ ಕ್ಷೇತ್ರದಲ್ಲಿ ಎಲ್ಲ ಜನತೆಯ ಸಹಕಾರವನ್ನು ಪಡೆದು ಒಳ್ಳೆಯ ಕೆಲಸವನ್ನು ಮಾಡಬೇಕಾಗಿದೆ. ಶ್ರೀ ಸಮರ್ಥ ಶ್ರೀಧರ ಕುಟೀರದಲ್ಲಿ ಮುಂದಿನದಲ್ಲಿ 4ವೇದಗಳ ಪಾಠಶಾಲೆ, ಸಂಸ್ಕೃತ ಪಾಠಶಾಲೆ, ದೇಶಿಯ ಗೋ ತಳಿಗಳ ಗೋಶಾಲೆ ನಡೆಸಲಾಗುತ್ತಿದೆ. ನಿರಂತರವಾಗಿ ಅನ್ನದಾನ ಇಂದಿನಿಂದ ಆರಂಭವಾಗಿದೆ. ನಾವು ನಂಬಿದ್ದು ನಾರಾಯಣನನ್ನು ಅವನು ಎಲ್ಲವನ್ನೂ ನೀಡುತ್ತಾನೆ ಎನ್ನುವ ವಿಶ್ವಾಸ ಇದೆ. ವೈದಿಕ ಪರಂಪರೆಯನ್ನು, ಸಂಸ್ಕೃತಿ, ಸಂಸ್ಕಾರವನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಸಂಸ್ಕೃತಿ ಹಾಗೂ ಸಂಸ್ಕಾರವನ್ನು ನಂಬಿ ನಡೆದರೆ ಜೀವನ ಸಾರ್ಥಕ ಆಗುತ್ತದೆ ಎಂದು ಸುದ್ದಿಗಾರರಿಗೆ ಶ್ರೀಮದಾತ್ಮಾನಂದ ಸರಸ್ವತೀ ಸ್ವಾಮಿಗಳು ಹೇಳಿದರು.
ಯುವಕರರು ತಳಿದುಕೊಂಡವರಾಗಿದ್ದಾರೆ, ವಿದ್ಯಾವಂತರಿದ್ದಾರೆ. ಯುವ ಸಮೂಹಕ್ಕೆ ಸರಿಯಾದ ಮಾರ್ಗದರ್ಶನದ ಕೊರತೆ ಇದೆ.ಸನಾತನ ಧರ್ಮದ ಕುರಿತು, ಸಂಸ್ಕೃತಿ, ಸಂಸ್ಕಾರ, ಪರಂಪರೆಯ ಕುರಿತು ಗುರು-ಹಿರಿಯರು ಮಾರ್ಗದರ್ಶನ ನೀಡಬೇಕಾಗಿದೆ. ಕರ್ನಾಟಕದಲ್ಲಿ ರಾಜಕೀಯ ಬದಲಾವಣೆ ಆಗಲಿದೆ. ಸನಾತನ ಧರ್ಮವನ್ನು ಗೌರವಿಸುವವರು ಮುಂದೆ ಬರುತ್ತಾರೆ. ಮುಂದಿನ ದಿನದಲ್ಲಿ ಇಲ್ಲಿಯ ಶ್ರೀ ಸಮರ್ಥ ಶ್ರೀಧರ ಕುಟೀರದಲ್ಲಿ ತಿಂಗಳಲ್ಲಿ 20ದಿವಸ ಇಲ್ಲಿಯೇ ಇರುತ್ತೇನೆ. ಉಳಿದ ಹತ್ತು ದಿವಸ ಭಕ್ತರು, ಶಿಷ್ಯರು ಅಪೇಕ್ಷೆಪಪಟ್ಟಲ್ಲಿ ಭೇಟಿ ನೀಡುತ್ತೇನೆ ಎಂದು ಹೇಳಿದರು.
ವೇ.ವಿ.ವಿವಿಶ್ವನಾಥ ಭಟ್ಟ ನೀರಗಾನು ಇವರ ಪ್ರಧಾನ ಆಚಾರ್ಯತ್ವದಲ್ಲಿ ಹಾಗೂ ಪುರೋಹಿತರಾದ ವೇ.ಮೂ.ಗಣಪತಿ ಗಣೇಶ ಭಟ್ಟ ದಾಸಿನಹುಡಿಲು ಮತ್ತು ವೈದಿಕ ವೃಂದದವರಿಂದ ಗುರುಗಣಪತಿ ಪ್ರಾರ್ಥನೆ, ದೇವನಾಂದಿ ಬ್ರಹ್ಮಕೂರ್ಚ ಹೋಮ, ಪುಣ್ಯಾಹ,ಕೃಚ್ಚಾಚರಣೆ, ಪ್ರಧಾನ ಸಂಕಲ್ಪ, ಮಧುಪರ್ಕ ಪೂಜೆ, ನವಗ್ರಹ ಶಾಂತಿ, ಸಪ್ತಶತೀಪಾಠ ಪ್ರಾರಂಭ. ಉದಕಶಾಂತಿ, ನವಾಕ್ಷರೀಜಪ, ವಾಸ್ತು-ರಾಕ್ಷೋಘ್ನ ಬಲಿ, ಅಗ್ನಿ ಜನನ, ಕುಂಡ ಸಂಸ್ಕಾರ, ಕಲಶ ಸ್ಥಾಪನೆ. ದಶಸಹಸ್ರ ಮೋದಕ ಹವನ, ಸಪ್ತಶತೀ ಪಾಠ, ಶಾಂತಿ ಪಾಠ ಜಪಾದಿಗಳು, ಮಹಾರುದ್ರ ಹವನ,ಸಪ್ತಶತೀ ಪಾಠ, ಬಿಂಬ ಶುದ್ಧಿ, ಅಧಿವಾಸಾದಿಗಳು ಜರುಗಿತು.
ಗುರುವಾರ ವೃಷಭಲಗ್ನದ ಶುಭಮುಹೂರ್ತದಲ್ಲಿ ಶ್ರೀ ಆಂಜನೇಯ ದೇವರ ಪ್ರತಿಷ್ಠೆ, ತದಂಗ ಹೋಮಗಳು, ಶಾಂತಿ ಪ್ರಾಯಶ್ಚಿತ ಹೋಮ, ಜಪಗಳು ಜರುಗಿತು.
ಫೆ.24ರಂದು ಶತ ಚಂಡೀಯಾಗ,25ರಂದು ಆದಿತ್ಯ ಹೃದಯ ಪಾರಾಯಣ ಹೋಮ, 26ರಂದು ನರಸಿಂಹ ಮೂಲ ಮಂತ್ರ ಹೋಮ, ಪೂರ್ಣಾಹುತಿ ಮತ್ತಿತರ ಧಾರ್ಮಿಕ ಕಾರ್ಯಕ್ರಮ ಹಾಗೂ ಶ್ರೀಗಳಿಂದ ಆಶೀರ್ವಚನ ನಡೆಯಲಿದೆ.