ಹೊನ್ನಾವರ: ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಸಾಹಿತ್ಯ ರಚನೆ ಕುರಿತಾಗಿ ಅಭಿರುಚಿ ಮೂಡಿಸಿ ಹುದುಗಿರುವ ಸೂಕ್ತ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆಯಾಗಿರುವ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಾಗಾರವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಕಾರ್ಯಕ್ರಮದ ಜಿಲ್ಲಾಮಟ್ಟದ ನೋಡಲ್ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಉತ್ತರ ಕನ್ನಡ ಮುಖ್ಯ ಯೋಜನಾಧಿಕಾರಿಗಳಾದ ವಿನೋದ ಅಣ್ವೇಕರ ಅಧಿಕಾರಿಗಳಿಗೆ ಕರೆನೀಡಿದರು.
ಅವರು ಇತ್ತೀಚೆಗೆ ಹೊನ್ನಾವರ ತಾಲೂಕ ಪಂಚಾಯತ ಸಭಾಭವನದಲ್ಲಿ ಜಿಲ್ಲಾಮಟ್ಟದ ಮಕ್ಕಳ ಸಾಹಿತ್ಯ ಸಂಭ್ರಮದ ಕುರಿತಾದ ಜಿಲ್ಲಾಮಟ್ಟದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಕಾರ್ಯಾಗಾರದ ವಿವಿಧ ಜವಾಬ್ದಾರಿಗಳ ಹಂಚಿಕೆ ಮಾಡಲಾಯಿತು. ಎಲ್ಲಾ ಅಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಕರ ಸಹಯೋಗದಲ್ಲಿ ವ್ಯವಸ್ಥಿತವಾಗಿ ಕಾರ್ಯಾಗಾರ ನಡೆಸುವುದೆಂದು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಹೊನ್ನಾವರ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಿಎಸ್ ನಾಯ್ಕ, ಭಟ್ಕಳ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿ.ಡಿ. ಮೊಗೆರ್, ತಾಲೂಕ ನೋಡಲ್ ಅಧಿಕಾರಿ ಮತ್ತು ನರೇಗಾ ಸಹಾಯಕ ನಿರ್ದೇಶಕರಾದ ಕೃಷ್ಣಾನಂದ ಕೆ. ಜಿಲ್ಲಾಮಟ್ಟದ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು.