ಅಂಕೋಲಾ: ಆರೋಗ್ಯಕರ ಜೀವನಕ್ಕೆ ಮಾನಸಿಕ, ಶಾರೀರಿಕ ಸದೃಢತೆ ಅಗತ್ಯವಾಗಿದೆ. ಈ ರೀತಿಯ ಸದೃಢತೆಗೆ ಸಾಂಸ್ಕ್ರತಿಕ ಮನೋರಂಜನೆ ಅಗತ್ಯ ಎಂದು ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಮನೋಹರ ಎಂ ಹೇಳಿದರು.
ತಾಲ್ಲೂಕಿನ ಜೆಎಂಎಫ್ಸಿ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ 10ನೇ ವರ್ಷದ ಜಿಲ್ಲಾ ಮಟ್ಟದ ವಕೀಲರ ಕ್ರಿಕೆಟ್ ಪಂದ್ಯಾವಳಿ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಇಲಾಖೆಗಳ ಕಾರ್ಯಗಳ ಒತ್ತಡಗಳ ನಡುವೆ ಆರೋಗ್ಯವಂತರಾಗಿ ಹಾಗೂ ಉತ್ತಮವಾಗಿ ಕಾರ್ಯ ನಿರ್ಹವಹಿಸಲು ಮನೋ ಚೈತನ್ಯವನ್ನು ತುಂಬಲು ಸಾಂಸ್ಕೃತಿಕ ಸ್ಪರ್ಧೆಗಳು ಸಹಕಾರಿ ಎಂದರು.
ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಪ್ರಶಾಂತ ಬಾದವಾಡಗಿ, ಆರೋಗ್ಯವಂತ ಜೀವನಕ್ಕೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಉಪಯುಕ್ತವಾಗಿದೆ ಎಂದರು.
ಅಂಕೋಲಾ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ಅರ್ಪಿತಾ ಬೆಲ್ಲದ್ ಮಾತನಾಡಿ, ಸ್ಪರ್ಧೆಗಳು ಕೇವಲ ದೈಹಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದಲ್ಲದೆ ಪ್ರತಿಭೆಯ ಅನಾವರಣಕ್ಕೆ ಸ್ಫೂರ್ತಿಯಾಗುತ್ತದೆ. ಸ್ಪರ್ದೆಯಲ್ಲಿ ಎದುರಾಳಿಯ ಬಗ್ಗೆ ಯೋಚಿಸುವ ಬದಲು ಉತ್ತಮ ಪ್ರದರ್ಶನ ನೀಡುವತ್ತ ಗಮನ ಹರಿಸಬೇಕು ಎಂದರು. ಸಿಪಿಐ ಶ್ರೀಕಾಂತ ತೋಟಗಿ, ಕಾರ್ಯಭಾರದ ಒತ್ತಡದ ನಡುವೆ ಮಾನಸಿಕ ನೆಮ್ಮದಿಗೆ ಇಂಥಹ ಕಾರ್ಯಕ್ರಮಗಳು ಜರುಗಬೇಕು. ಇದು ಎಲ್ಲರೊಂದಿಗೆ ಬೆರೆಯುವುದರ ಜೊತೆಗೆ ಅನ್ಯೋನ್ಯತೆಯನ್ನು ಭಾವನೆ ನಿರ್ಮಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ವಿನೋದ ಶಾನಭಾಗ, ಕ್ರೀಡಾ ಸ್ಪರ್ದೆಯೊಂದಿಗೆ ಇದೇ ಮೊದಲ ಬಾರಿಗೆ ಸಾಂಸ್ಕೃತಿಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದರು.
ವಕೀಲರ ಸಂಘದ ಉಪಾಧ್ಯಕ್ಷ ನಿತ್ಯಾನಂದ ಕವರಿ ವೇದಿಕೆಯಲ್ಲಿದ್ದರು. ಜಿಲ್ಲಾ ನೋಟರಿ ಸಂಘದ ಅಧ್ಯಕ್ಷ ನಾಗಾನಂದ ಬಂಟ್ ನಿರೂಪಿಸಿದರು. ನಿವೃತ್ತ ಶಿಕ್ಷಕ ಸಾತು ಗೌಡ ಮತ್ತು ಶಿವಾನಂದ ನಾಯ್ಕ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು. ವಕೀಲ ಆರ್.ಟಿ.ಗೌಡ ವಂದಿಸಿದರು. ವಕೀಲ ದಿವಂಗತ ಪಾಂಡು ಆರ್. ನಾಯ್ಕ ಇವರ ಸ್ಮರಣಾರ್ಥ ಸ್ಪರ್ಧೆ ನಡೆಸಲಾಯಿತು.