ಯಾಗ ಶಾಲೆಯಲ್ಲಿ ಧರ್ಮ ಯಜ್ಞ; ಪ್ರಾಂಗಣದಲ್ಲಿ ಸೇವಾ ಯಜ್ಞ!
ಶಿರಸಿ: ಸ್ವರ್ಣವಲ್ಲೀ ಮಠದಲ್ಲಿ ಶಿಷ್ಯ ಸ್ವೀಕಾರ ಮಹೋತ್ಸವಕ್ಕೆ ಧಾರ್ಮಿಕ ಸಂಭ್ರಮ ಧರ್ಮ ಯಜ್ಞದ ಜೊತೆಗೆ ಆಗಮಿಸುವ ಭಕ್ತರಿಗೆ ಸಕಲ ಸೌಲಭ್ಯ, ಸೌಕರ್ಯ ಒದಗಿಸಲು ಕಾರ್ಯಕರ್ತರು ಸೇವಾ ಯಜ್ಞಕ್ಕೆ ಕಂಕಣ ತೊಟ್ಟಿದ್ದಾರೆ.
ಫೆ. 18ರಿಂದ ಐದು ದಿನಗಳ ಕಾಲ ಸ್ವರ್ಣವಲ್ಲೀ ಮಠದಲ್ಲಿ ನಡೆಯುವ ಶಿಷ್ಯ ಸ್ವೀಕಾರಕ್ಕೆ ಪ್ರತಿ ದಿನ 600ಕ್ಕೂ ಅಧಿಕ ಕಾರ್ಯಕರ್ತರು ಅವಿರತ ಕೆಲಸ ಮಾಡುತ್ತಿದ್ದಾರೆ. ಶ್ರೀ ಮಠದಲ್ಲಿಯೇ 250ಕ್ಕೂ ಅಧಿಕ ಸ್ವಯಂ ಸೇವಕರು ಐದೂ ದಿನಗಳ ಕಾಲ ವಾಸ್ತವ್ಯ ಮಾಡಿ ಸೇವೆ ನೀಡಲು ಅಕ್ಷರಶಃ ‘ಪಣ’ ತೊಟ್ಟಿದ್ದಾರೆ.
ಸ್ವಯಂ ಸೇವಕರಾಗಿ ಉದ್ಯೋಗಿಗಳು, ಇಂಜನೀಯರುಗಳು, ರೈತರು, ವಿದ್ಯಾರ್ಥಿಗಳು, ವರ್ತಕರು, ಮಾತೃ ಮಂಡಳಿ, ಮಠದ ವಿವಿಧ ಸಮಿತಿಗಳು, ಅಂಗ ಸಂಸ್ಥೆಯ ಪ್ರಮುಖರು, ಕಾರ್ಯಕರ್ತರು, ಶ್ರದ್ದಾಳುಗಳು ಸೇರಿದಂತೆ ಅನೇಕರು ಸೇವಾ ಯಜ್ಞದಲ್ಲಿ ತೊಡಗಿದ್ದಾರೆ. ಹವ್ಯಕ, ರಾಮಕ್ಷತ್ರೀಯ, ಮರಾಠ, ಸಿದ್ಧಿ, ಹಾಲಕ್ಕಿ, ಗೌಳಿ, ಕುಣಬಿ ಹಾಗೂ ಇತರ ಸಮಾಜದವರು ಸೇವಾ ಮನೋಭಾವದಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಷ್ಯ ಸ್ವೀಕಾರ ಮಹೋತ್ಸವದ ಯಶಸ್ವಿಗೆ, ಗುರುಗಳ ಸಂಕಲ್ಪಕ್ಕೆ ಕಟಿಬದ್ಧರಾಗಿದ್ದಾರೆ.
80ಕ್ಕೂ ಅಧಿಕ ವೈದಿಕರ ಜೊತೆಗೆ 90ಕ್ಕೂ ಅಧಿಕ ಪರಿಚಾರಕರು, ದೇವತಾ ಸೇವೆಯಲ್ಲಿ ಪಾರಂಪರಿಕವಾಗಿ ದ್ರವ್ಯ, ಹಣ್ಣುಕಾಯಿ, ಪ್ರಸಾರ ಸೇವೆಯಲ್ಲಿ ೪೦ಕ್ಕೂ ಅಧಿಕ ಜನರು ಪಾಳಿಯ ಪ್ರಕಾರ ಕೆಲಸ ಮಾತ್ತಿದ್ದಾರೆ. ಆಯ್ದ ಕಡೆ ರಕ್ಷಣೆ, ಭದ್ರತೆಗೂ ಕೆಲಸ ಮಾಡುತ್ತಿದ್ದಾರೆ.
ಸ್ವಾಗತ ಹಾಗೂ ಮಾರ್ಗದರ್ಶನಕ್ಕೆ 30 ಜನರು, ಊಟೋಪಚಾರಕ್ಕೆ 20ರ ತನಕ ಎಲ್ಲ ಸೇರಿ ಪ್ರತಿ ದಿನ 300 ಕಾರ್ಯಕರ್ತರು ಕಾರ್ಯ ಮಾಡುತ್ತಿದ್ದಾರೆ. ಕೊನೆಯ ಎರಡು ದಿನ ಫೆ.21, 22ಕ್ಕೆ ೬೦೦ರಿಂದ 700ಕಾರ್ಯಕರ್ತರು ಅನ್ನ ಪ್ರಸಾದ, ಪಾನೀಯ ಸೇವೆ ನೀಡಲು ಸಜ್ಜಾಗುತ್ತಿದ್ದಾರೆ. ಭಕ್ತರಿಗೆ ಊಟೋಪಚಾರ ಒದಗಿಸಲು 40 ಬಾಣಸಿಗರು ಕೆಲಸ ಮಾಡುತ್ತಿದ್ದಾರೆ. ವಿವಿಧ ಸೀಮೆಯ ಶಿಷ್ಯರು ತಾ ಮುಂದು ನಾ ಮುಂದು ಎಂದು ಬರುತ್ತಿದ್ದಾರೆ. ಸರ್ವ ಸೇವೆಗೆ ಕಂಟ್ರೋಲ್ ರೂಂ ಮಾಡಲಾಗಿದೆ. ಆರೋಗ್ಯ, ಅಗ್ನಿ ಶಾಮಕ ದಳ, ಪೊಲೀಸರ ಸಹಕಾರ ಸೇರಿದಂತೆ ವಿವಿಧ ಇಲಾಖೆಗಳೂ ಸಹಕಾರ ನೀಡುತ್ತಿವೆ.
ತನ್ಮಧ್ಯೆ ಆಗಮಿಸುವ ಭಕ್ತರಿಗೆ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ಮಠಕ್ಕೆ ನಿತ್ಯ ಒಂದುವರೆ ಸಾವಿರಕ್ಕೂ ಅಧಿಕ ವಾಹನಗಳು ಬರುತ್ತಿದ್ದು, ದ್ವಿಚಕ್ರ, ಕಾರುಗಳ ಪಾರ್ಕಿಂಗ್ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಯತಿಗಳು, ಅತಿ ಗಣ್ಯರು, ಋತ್ವಿಜರು, ಗಣ್ಯರು, ಪದಾಧಿಕಾರಿಗಳಿಗೆ, ಮಾಧ್ಯಮಗಳಿಗೆ, ಭಕ್ತರು, ಕಾರ್ತಕರ್ತರು ಎಂಬ ಪ್ರತ್ಯೇಕ ವಿಭಾಗ ಮಾಡಲಾಗಿದ್ದು, ಸುಮಾರು 11 ಕಡೆ ಸ್ಥಳ ನಿಯೋಜನೆ ಮಾಡಲಾಗಿದೆ. ಮಠದ ಗದ್ದೆಯಲ್ಲಿ ಫೆ.21,22ಕ್ಕೆ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 50ಕ್ಕೂ ಅಧಿಕ ಸ್ವಯಂ ಸೇವಕರು ಬಿಸಲು ಲೆಕ್ಕಸಿದೇ ಸಮವಸ್ತ್ರದಲ್ಲಿ ವಾಹನ ನಿಲುಗಡೆಗಳಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಠದ ಪ್ರವೇಶ ದ್ವಾರದ ಪಕ್ಕದಲ್ಲಿ ಹೊರೆಗಾಣಿಕೆ ಸ್ವೀಕರಿಸಲು ಮಳಿಗೆ ತೆರೆದಿದ್ದು,ಭಕ್ತರು ಅತ್ಯಂತ ಪ್ರೀತಿಯಲ್ಲಿ ಮನೆಯಲ್ಲಿ ಬೆಳೆದ ದವಸ ಧಾನ್ಯ, ತರಕಾರಿ ನೀಡುತ್ತಿದ್ದಾರೆ. ತೆಂಗಿನಕಾಯಿ, ಕುಂಬಳಕಾಯಿ, ಹಾಲು, ತುಪ್ಪ, ಮೊಸರು, ಬಾಳೆ ಎಳೆ, ವೀಳ್ಯದೆಲೆ, ಅಡಿಕೆ, ಅಕ್ಕಿ, ಬೆಲ್ಲ, ಏಲಕ್ಕಿ ಸಲ್ಲಿಕೆ ಆಗುತ್ತಿದ್ದು, ಜೇನು ತುಪ್ಪ ಸಂಗ್ರಹಣೆಗೂ ಭಕ್ತರು ಉತ್ಸುಕರಾಗಿದ್ದಾರೆ.
ಬೆಳಿಗ್ಗೆ 8.30ರಿಂದ ರಾತ್ರಿ 7 ತನಕ ಹೊರಗಾಣಿಕೆ ಸಲ್ಲಿಸಲು ರಥದ ಮನೆಯ ಪಕ್ಕ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯಕರ್ತರ ವಿಭಾಗದ ಸಂಚಾಲಕರಾದ ಟಿ.ಎನ್.ಭಟ್ ನಡಿಗೆಮನೆ, ರಮಾಕಾಂತ ಹೆಗಡೆ ವಾನಳ್ಳಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.