ದಾಂಡೇಲಿ : ನಗರದಲ್ಲಿರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದಾಂಡೇಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶನಿವಾರ ವಿಶ್ವಗುರು , ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಮುರ್ತುಜಾ ಹುಸೇನ ಆನೆಹೊಸೂರ, ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳ ರೀತಿಯಲ್ಲಿ ವಚನಗಳನ್ನು ರಚಿಸಿ ಜನರಲ್ಲಿ ಜಾಗೃತಿ ಮೂಡಿಸಿರುವುದರ ಜೊತೆಯಲ್ಲಿ ಕಾಯಕ, ದಾಸೋಹವನ್ನು ಬೋಧಿಸಿದ ಬಸವಣ್ಣನವರು ಯಾರೂ ಕುಳಿತು ತಿನ್ನದೇ ಕಾಯಕದಲ್ಲಿ ತೊಡಗಬೇಕೆಂದು ಪ್ರತಿಪಾದಿಸಿದರು. ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಬುದ್ಧ, ಬಸವ, ಮಹಾತ್ಮಾ ಗಾಂಧಿ, ಅಂಬೇಡ್ಕರ್ ಈ ಎಲ್ಲ ಮಹನೀಯರು ಆರೋಗ್ಯಕರ, ಮನುಷ್ಯತ್ವದಿಂದ ಕೂಡಿದ ಸಾಮಾಜಿಕ ವ್ಯವಸ್ಥೆಯನ್ನು ಬಯಸಿದವರು. ಅಸಮಾನತೆ ತೊಲಗಿ ಎಲ್ಲರೂ ಗೌರವದಿಂದ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕೆಂಬ ದಿಸೆಯಲ್ಲಿ ಬಸವಣ್ಣನವರು ಶ್ರಮಿಸಿದವರು ಎಂದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾದ ನಾರಾಯಣ ನಾಯ್ಕ,ಕಾರ್ಯದರ್ಶಿ ಪ್ರವೀಣ್ ನಾಯ್ಕ, ಖಜಾಂಚಿ ಶ್ರೀಮಂತ ಮದರಿ ಉಪಸ್ಥಿತರಿದ್ದರು.