ಸಿದ್ದಾಪುರ: ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಆರಂಭಿಕ ಶಿಕ್ಷಣ ನೀಡಲು ಅವಕಾಶ ನೀಡಿದ್ದರೂ ಅವಶ್ಯಕತೆಗೆ ತಕ್ಕಂತೆ ಸೌಲಭ್ಯಗಳ ಕೊರತೆ ಇದ್ದೆ ಇರುತ್ತದೆ. ಹೀಗಾಗಿ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯಡಿ ಶಾಲಾ ಅಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.
ಸಿದ್ದಾಪುರ ತಾಲೂಕಿನ ಹಲಗೇರಿ ಗ್ರಾಮ ಪಂಚಾಯತ್ನ ಹೇಮಗಾರ ಗ್ರಾಮದಲ್ಲಿ ಕಳೆದ 14 ವರ್ಷಗಳಿಂದಲೂ ಅಂಗನವಾಡಿ ಮಕ್ಕಳಿಗೆ ನಿರ್ದಿಷ್ಟ ಕಟ್ಟಡವಿಲ್ಲದೆ ಪರದಾಡುತ್ತಿದ್ದರು. ಮೂರರಿಂದ ಆರು ವರ್ಷದ ಹದಿನಾಲ್ಕು ಕಂದಮ್ಮಗಳಿರುವ ಈ ಕುಗ್ರಾಮದಲ್ಲಿ 2023-24 ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅಂದಾಜು 5ಲಕ್ಷ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಅಂದಾಜು 5ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡದ ಸೌಲಭ್ಯ ಕಲ್ಪಿಸಿದ್ದು ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಗ್ರಾಮ ಪಂಚಾಯತ್ ಕಾರ್ಯಾಲಯದಿಂದ ಸುಮಾರು 7-8 ಕಿ. ಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಸುಮಾರು 35-40 ಕುಟುಂಬಗಳಿದು,್ದ ಇಲ್ಲಿನ ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಈ ಅಂಗನವಾಡಿ ಕಟ್ಟಡ ಅತಿ ಅವಶ್ಯವಾಗಿತ್ತು. ಅಲ್ಲದೇ ಗುಡ್ಡಗಾಡು ಪ್ರದೇಶವಾದ್ದರಿಂದ ಮಳೆಗಾಲದ ಸಂದರ್ಭದಲ್ಲಿ ಮಕ್ಕಳ ಆಟ ಪಾಠಗಳಿಗೂ ತೊಂದರೆಯಾಗುತ್ತಿತ್ತು. ಇನ್ನು ಮಕ್ಕಳ ಆಹಾರ ಪದಾರ್ಥಗಳ ಸಂಸ್ಕರಣೆ, ಆಟೋಪಕರಣಗಳ ಸುರಕ್ಷಿತವಾಗಿಡಲು ಜಾಗವಿಲ್ಲದೇ ಅನಾನುಕೂಲತೆಯೇ ಎದ್ದು ಕಾಣುತಿತ್ತು. ಆದರೀಗ ಎಲ್ಲದಕ್ಕೂ ಪರಿಹಾರ ಎಂಬಂತೆ ಕಟ್ಟಡ ನಿರ್ಮಾಣವಾಗಿ ಕಂಗೊಳಿಸುತ್ತಿದೆ.
ಈ ಕುರಿತು ಅಂಗನವಾಡಿ ಕಾರ್ಯಕರ್ತೆ ಕವಿತಾ ನಾಯ್ಕ ಮಾತನಾಡಿ ನಮ್ಮ ಅಂಗನವಾಡಿಗೆ ಕಟ್ಟಡವಿಲ್ಲ ಎಂಬ ಕೊರಗಿತ್ತು. ಆದರೀಗ ನಮ್ಮ ಮಕ್ಕಳು ಕಟ್ಟಡ ನಿರ್ಮಾಣದಿಂದ ತುಂಬಾ ಖುಷಿಯಾಗಿದ್ದಾರೆ. ಮಕ್ಕಳು ಹೊಸ ಹುರುಪಿನಿಂದ ಅಂಗನವಾಡಿಗೆ ಧಾವಿಸಲು ಕಾತುರರಾಗಿದ್ದಾರೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಂಗಾಧರ ನಾಯ್ಕ ಮಾತನಾಡಿ ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಶಾಲೆಗೆ ಸಂಬಂಧಿಸಿದಂತೆ ಕಾಮಗಾರಿ ಅವಶ್ಯಕತೆ ಇರುವ ಕಡೆ ಅಭಿವೃದ್ಧಿ ಕೈಗೊಳ್ಳಲು ಸದಾ ಸಿದ್ದರಿದ್ದೇವೆ ಇದಕ್ಕೆ ನಮ್ಮ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರೂ ಹಾಗೂ ಗ್ರಾಮಸ್ಥರು ಸಹ ಸಹಕಾರ ನೀಡುತ್ತಿದ್ದಾರೆ ಎಂದರು.