ಸಿದ್ದಾಪುರ: ತಾಲೂಕಿನ ಕಲಗದ್ದೆಯ ಶ್ರೀನಾಟ್ಯ ವಿನಾಯಕ ಹಾಗೂ ರಾಜರಾಜೇಶ್ವರಿ ದೇವಲಾಯದಲ್ಲಿ ನಡೆಸಲಾಗುತ್ತಿರುವ ಗಾಯತ್ರೀ ಜಪಯಜ್ಞದ ನೂರನೇ ದಿನ ಸಂಭ್ರಮ ಹಾಗೂ ಭಕ್ತರ ಭಕ್ತಿ ಭಾವದಲ್ಲಿ ನಡೆಯಿತು. ಒಂದು ವರ್ಷಗಳ ಕಾಲ ನಿರಂತರವಾಗಿ ಗಾಯತ್ರೀ ಜಪಯಜ್ಞ ನಡೆಸಬೇಕು ಎಂಬ ಸಂಕಲ್ಪದೊಂದಿಗೆ ಕಳೆದ ಅಕ್ಟೋಬರ್ 30 ರಿಂದ ಬರುವ ಅಕ್ಟೋಬರ್ 30ರ ತನಕ ನಡೆಸಲಾಗುತ್ತಿದೆ. ನೂರನೇ ದಿನವಾದ ಮಂಗಳವಾರ ನೂರಾರು ಗಾಯತ್ರೀ ಜಪ ಉಪದೇಶಿತರು, ವೈದಿಕರು ಪಾಲ್ಗೊಂಡು ಯಜ್ಞಕ್ಕೆ ಹವಿಸ್ಸು ಹಾಕಿದರು. ನಾಟ್ಯ ವಿನಾಯಕ ದೇವಸ್ಥಾನದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ಅವರ ಯಜಮಾನಿಕೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಶಿರಸಿ, ಸಿದ್ದಾಪುರ, ಕುಮಟಾ, ಸಾಗರ, ಹೊನ್ನಾವರ, ಯಲ್ಲಾಪುರ ಗೋಕರ್ಣ ಸೇರಿದಂತೆ ಅನೇಕ ಕಡೆಯ ಭಕ್ತಾದಿಗಳು, ವೈದಿಕ ವಿದ್ವಾಂಸರು ಭಾಗವಹಿಸಿದ್ದರು.