ಸಿದ್ದಾಪುರ: ತಾಲೂಕಿನಲ್ಲಿ ಮಂಗನ ಖಾಯಿಲೆ (ಕೆಎಫ್ಡಿ)ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ವರ್ಷ ಇಂದಿನವರೆಗೆ ಒಟ್ಟೂ 37ಜನರಲ್ಲಿ ದೃಡಪಟ್ಟಿದೆ. 23ಜನರು ವಿವಿಧ ಆಸ್ಪತ್ರೆಯಲ್ಲಿ ಹಾಗೂ 14ಜನರು ಮನೆಯಲ್ಲಿಯೇ ಚಿಕಿತ್ಸೆಪಡೆದುಕೊಳ್ಳುತ್ತಿದ್ದಾರೆ.
ತಾಲೂಕಿನ ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಕೆಎಫ್ಡಿ ಜನರಲ್ಲಿ ಕಾಣಿಸಿಕೊಳ್ಳುವ ಪೂರ್ವದಲ್ಲಿ ತಾಲೂಕಿನಲ್ಲಿ ಎಲ್ಲಿಯೂ ಮಂಗಗಳು ಸತ್ತ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ಅದರೆ ಕಳೆದ ಒಂದು ವಾರದಿಂದೀಚೆಗೆ 4 ಮಂಗಗಳು ಸಾವನ್ನಪ್ಪಿರುವುದು ಕಂಡುಬಂದಿದ್ದರಿಂದ ಜನತೆ ಮತ್ತಷ್ಟು ಆತಂಕ ಪಡುವಂತಾಗಿದೆ. ಸಾವನ್ನಪ್ಪಿದ ಮಂಗಗಳು ರೋಗದಿಂದಲ್ಲೇ ಸಾವನ್ನಪಿದೆಯೋ ಎನ್ನುವುದು ಇನ್ನೂ ಖಚಿತವಾಗಿಲ್ಲ. ಆದರೆ ಮಂಗಗಳು ಸಾನ್ನಪ್ಪಿದ ಸುತ್ತಮುತ್ತಲಿನ ಏರಿಯಾದಲ್ಲಿಯೇ ಜನರಲ್ಲಿ ಕೆಎಫ್ಡಿ ಕಾಣಿಸಿಕೊಂಡಿದ್ದರಿಂದ ಆರೋಗ್ಯ, ಅರಣ್ಯ, ಗ್ರಾಪಂ ಹಾಗೂ ಮತ್ತಿತರ ಇಲಾಖೆಯವರು ಎಚ್ಚೆತ್ತುಕೊಂಡು ಸ್ಥಳೀಯವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಆರೋಗ್ಯ ಇಲಾಖೆ ಕೊರ್ಲಕೈ ಗ್ರಾಪಂ ವ್ಯಾಪ್ತಿಯಲ್ಲಿ ಆರೋಗ್ಯ ಶಿಬಿರ, ರಕ್ತ ತಪಾಸಣೆ, ರೋಗದ ಕುರಿತು ಮಾಹಿತಿ ನೀಡುತ್ತಿರುವುದಲ್ಲದೇ ಜನರು ಸ್ವಲ್ಪ ದಿನದ ಮಟ್ಟಿಗೆ ಕಾಡಿಗೆ ತೆರಳಿ ದರಕು(ತರಗೆಲೆ), ಕಟ್ಟಿಗೆ ತರುವುದಕ್ಕೆ ಹೋಗಬಾರದು ಎಂದು ತಿಳುವಳಿಕೆ ನೀಡುತ್ತಿದೆ.ರೋಗ ನಿಯಂತ್ರಣಕ್ಕೆ ಬರಬೇಕಾದರೆ ಆರೋಗ್ಯ, ಅರಣ್ಯ, ಪಶುಸಂಗೋಪನೆ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು ಮತ್ತಷ್ಟು ಜಾಗೃತರಾಗವುದರ ಜತೆಗೆ ಸಾರ್ವಜನಿಕರು ಹೆಚ್ಚು ಜಾಗೃತರಾದರೆ ಮಾತ್ರ ರೋಗ ನಿಯಂತ್ರಣೆ ಬರಲು ಸಾಧ್ಯ.
ಕೆಎಫ್ಡಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಯಾವುದೇ ವ್ಯಕ್ತಿಯಲ್ಲಿ ರೋಗದ ಲಕ್ಷಣ ಹಾಗೂ ರೋಗದ ತೀವೃತೆ ಹೆಚ್ಚು ಕಂಡುಬಂದಲ್ಲಿ ಅವರನ್ನು ಸಂಬಂಧ ಪಟ್ಟ ಆಸ್ಪತ್ರೆಗೆ ಕರೆದೊಯ್ಯಲು ಹಾಗೂ ಆರೋಗ್ಯ ಶಿಬಿರ, ಮಾಹಿತಿ ಕಾರ್ಯಾಗಾರ ನಡೆಸುವುದಕ್ಕೆ ಅಂಬ್ಯುಲೆನ್ಸ್ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮಿಕಾಂತ ನಾಯ್ಕ ತಿಳಿಸಿದ್ದಾರೆ.
ದಿನದಿಂದ ದಿನಕ್ಕೆ ಮಂಗನ ಕಾಯಿಲೆ ಹೆಚ್ಚು ಕಂಡುಬರುತ್ತಿರುವುದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ.ರಣದೀಪ್ ಅವರ ನೇತೃತ್ವದಲ್ಲಿ ಶಿವಮೊಗ್ಗದ ಡಿಎಚ್ಒ ಕಚೇರಿಯಲ್ಲಿ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆಯನ್ನು ಶನಿವಾರ ನಡೆಸಿ ಕೆಎಫ್ಡಿ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ನೀಡಿದ್ದಲ್ಲದೇ ಅಧಿಕಾರಿಗಳು ಹೆಚ್ಚು ಜಾಗೃತರಾಗಿ ಸಾರ್ವಜನಿಕರಿಗೆ ರೋಗದ ಕುರಿತು ಹಾಗೂ ರೋಗ ಹರಡುವಿಕೆ ಕುರಿತು ಮಾಹಿತಿ ನೀಡುವಂತೆ ಸೂಚಿದ್ದಾರೆ.