ಶಿರಸಿ: ನಗರದ ಯೋಗಮಂದಿರದಲ್ಲಿ ಸ್ಥಳೀಯ ರಾಗಮಿತ್ರ ಪ್ರತಿಷ್ಠಾನ ಪ್ರತಿ ತಿಂಗಳ ಮೊದಲ ಸೋಮವಾರ ನಡೆಸುತ್ತಿರುವ ಗುರು ಅರ್ಪಣೆ ಕಲಾ ಅನುಬಂಧ ಸಂಗೀತ ಕಾರ್ಯಕ್ರಮ ಫೆ.5 ಸಂಜೆ 5.30 ಕ್ಕೆ ನಡೆಯಲಿದೆ. ಅಂದು ನಡೆಯುವ ಕಾರ್ಯಕ್ರಮವನ್ನು ಶಿರಸಿ ಸಂಜೀವಿನಿ ಕ್ಲಿನಿಕ್ ವೈದ್ಯ ಡಾ.ವಿನಾಯಕ ಹೆಗಡೆ ಸೋಮನಹಳ್ಳಿ ಉದ್ಘಾಟಿಸಲಿದ್ದು, ಅಧ್ಯಕ್ಷತೆ ಆರ್.ಎನ್.ಭಟ್ಟ ಸುಗಾವಿ ಹಾಗೂ ಅತಿಥಿಯಾಗಿ ಎಮ್. ಎನ್.ಹೆಗಡೆ ಮಾಳೇನಳ್ಳಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಲಕ್ಷ್ಮೇಶ್ವರ ಶಾರದಾ ಸಂಗೀತ ಗುರುಕುಲದ ಸಂಗೀತ ಶಿಕ್ಷಕ ವಿ.ಕೃಷ್ಣಕುಮಾರ ಕುಲ್ಕರ್ಣಿ ಹಾಗೂ ಅಂದು ತಮ್ಮ ಗಾಯನ ಕೂಡಾ ನಡೆಸಿಕೊಡಲಿರುವ ಜನನಿ ಮ್ಯೂಸಿಕ್ ಸಂಸ್ಥೆಯ ವಿ.ರೇಖಾ ದಿನೇಶರನ್ನು ಸನ್ಮಾನಿಸಲಾಗುವುದು. ನಂತರ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಮಿತ್ರಾ ಮ್ಯೂಸಿಕಲ್ ವಿದ್ಯಾರ್ಥಿಗಳಿಂದ ಭಕ್ತಿ ಸಂಗೀತ ಹಾಗೂ ಕೃಪಾ ಕುಲ್ಕರ್ಣಿ ಮತ್ತು ಸುಮುಕಾ ಕುಲ್ಕರ್ಣಿ ಇವರಿಂದ ದ್ವಂದ ತಬಲಾವಾದನ ನಡೆಯಲಿದೆ. ಭರತ ಹೆಗಡೆ ಹೆಬ್ಬಲಸು ಹಾರ್ಮೋನಿಯಮ್ ಸೋಲೊ ನಡೆಸಿಕೊಡಲಿದ್ದಾರೆ. ನಂತರದಲ್ಲಿ ವಿ.ರೇಖಾ ದಿನೇಶ ರವರ ಗಾಯನ ನಡೆಯಲಿದ್ದು, ತಬಲಾದಲ್ಲಿ ಕೃಷ್ಣಕುಮಾರ ಕುಲ್ಕರ್ಣಿ ಹಾಗು ಸಂವಾದಿನಿಯಲ್ಲಿ ಪ್ರಕಾಶ ಹೆಗಡೆ ಯಡಳ್ಳಿ ಸಹಕರಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.