ಶಿರಸಿ: ಕೃಷಿಯಲ್ಲಿ ಬಳಸುತ್ತಿರುವ ವ್ಯಾಪಕ ರಾಸಾಯನಿಕಗಳು ಜೀವ ಜಗತ್ತಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಮನುಷ್ಯನ ಜೀವಿತಾವಧಿಯನ್ನು ಕಡಿಮೆ ಮಾಡಿದೆ ಎಂದು ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಆತಂಕ ವ್ಯಕ್ತಪಡಿಸಿದರು. ಮಂಗಳವಾರ ಶಿರಸಿಯ ಟಿ.ಆರ್.ಸಿ. ಸಭಾಭವನದಲ್ಲಿ ಜರ್ಮನಿ ಹಾಗೂ ಭಾರತ ಸರ್ಕಾರದ ಸಹಭಾಗಿತ್ವದಲ್ಲಿ ಜಿ.ಐ.ಝಡ್. ಹಾಗೂ ಸ್ಕೊಡ್‌ವೆಸ್ ಸಂಸ್ಥೆಯ ಸಹಯೋಗದಲ್ಲಿ ರೂಪಿಸಲಾದ “ಸು-ಕೃಷಿ” ಯೋಜನೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೃಷಿಯಲ್ಲಿ ಅಧಿಕ ರಾಸಾಯನಿಕ ಬಳಕೆಯಾಗುತ್ತಿರುವುದರಿಂದ ಮನುಷ್ಯನ ಜೀವ ನಿರೋಧಕ ಶಕ್ತಿ ಕಡಿಮೆಯಾಗಿ ಹಲವಾರು ರೋಗ ರುಜಿನಗಳಿಗೆ ತುತ್ತಾಗುತ್ತಿರುವುದು ಕಂಡುಬರುತ್ತಿದೆ. ಅಲ್ಲದೇ ಕೃಷಿ ಜೀವ ವೈವಿಧ್ಯತೆಯ ವ್ಯವಸ್ಥೆಯೇ ಕ್ಷೀಣಿಸಿದೆ. ಹೀಗೆ ಮುಂದುವರೆದಲ್ಲಿ ಮುಂದಿನ ಪೀಳಿಗೆಗೆ ಉತ್ತಮ ಸತ್ವಯುಕ್ತ ಆಹಾರ ಸಿಗದೇ ಗಂಭೀರ ಸಮಸ್ಯೆ ಎದುರಿಸಬೇಕಾದ ಅಪಾಯವಿದೆ ಎಂದು ಹೇಳಿದರು.
ಪ್ರಸ್ತುತ ಕೃಷಿ ಹಾಗೂ ಪಶುಸಂಗೋಪನೆ ವೆಚ್ಚದಾಯಕವಾಗುತ್ತಿರುವುದರಿಂದ ರೈತರು ಸಿದ್ಧ ಪಶು ಆಹಾರ, ಗೊಬ್ಬರ ಹಾಗೂ ಔಷಧಗಳ ಮೊರೆ ಹೋಗುತ್ತಿದ್ದು ಇದನ್ನೇ ಬಂಡವಾಳವನ್ನಾಗಿಸಿಕೊಂಡ ಕೆಲವು ಕಂಪನಿಗಳು ರೈತರನ್ನು ಸುಲಿಗೆ ಮಾಡುತ್ತಿದೆ. ಇಲಾಖಾ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನಿಗಳು ರೈತರಿಗೆ ಪೂರೈಕೆ ಆಗುತ್ತಿರುವ ಔಷಧ, ಗೊಬ್ಬರಗಳ ಗುಣಮಟ್ಟದ ಮೇಲೆ ನಿಗಾವಹಿಸಿ ಉತ್ತಮ ವಸ್ತುಗಳನ್ನು ಮಾತ್ರ ಬಳಸಲು ಶಿಫಾರಸ್ಸು ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಆರ್. ವಾಸುದೇವ್, ವಿವಿಧ ದೇಶಗಳ ಕೃಷಿ ವ್ಯವಸ್ಥೆಯ ಬಗ್ಗೆ ಉದಾಹರಿಸಿ ಭಾರತದ ಕೃಷಿ ಪದ್ಧತಿಯಲ್ಲಿ ಉಂಟಾಗುತ್ತಿರುವ ತಲ್ಲಣಗಳನ್ನು ವಿವರಿಸಿದರು. ಮುಂದುವರೆದು ನೀರು, ಮಣ್ಣು, ಕೃಷಿ ಅರಣ್ಯ ಹಾಗೂ ಪಶು ಸಂಗೋಪನೆಯಲ್ಲಿ ಪಾರಂಪರಿಕ ವಿಧಾನಗಳನ್ನು ಅನುಸರಿಸಿ ಸಾವಯವ ಕೃಷಿಯನ್ನು ರೂಢಿಸಿಕೊಂಡು ರಾಸಾಯನಿಕ ರಹಿತ ಸತ್ವಯುತ ಆಹಾರವನ್ನು ಉತ್ಪಾದಿಸಲು ಎಲ್ಲಾ ರೈತರು ಮುಂದಾಗಬೇಕು ಎಂದರು. ಜಿ.ಐ.ಝಡ್ ಸಂಸ್ಥೆಯ “ಸುವಾತಿ” ಕಾರ್ಯಕ್ರಮದ ಕೃಷಿ ಸಲಹೆಗಾರ ರತಿಕಾಂತ್ ನಾಯಕ್ ಜಿ.ಐ.ಝಡ್. ಯೋಜನೆಯ ಉದ್ದೇಶ, ಮಹತ್ವ ಹಾಗೂ ಅನುಷ್ಠಾನ ವಿಧಾನದ ಬಗ್ಗೆ ಪಿ.ಪಿ.ಟಿ ಮೂಲಕ ಪ್ರಾತ್ಯಕ್ಷಿಕೆ ನೀಡಿದರು. ಇದೇ ಸಂದರ್ಭದಲ್ಲಿ ಸುಸ್ಥಿರ ಕೃಷಿ ಮತ್ತು ಮಣ್ಣಿನ ಆರೋಗ್ಯ ಬಗ್ಗೆ ಸೊಯಿಲ್ ವಾಸು ಎಂದೇ ಪ್ರಖ್ಯಾತರಾದ ಬೆಂಗಳೂರಿನ ಮಣ್ಣು ವಿಜ್ಞಾನಿ ಪಿ. ಶ್ರೀನಿವಾಸ್ ರೈತರು ತಾವೇ ತಮ್ಮ ಭೂಮಿಯ ಮಣ್ಣು ಪರೀಕ್ಷೆ ಮಾಡಿಕೊಳ್ಳುವ ವಿಧಾನವನ್ನು ತಿಳಿಸುತ್ತಾ ಮಣ್ಣಿನ ಮಹತ್ವದ ಬಗ್ಗೆ ತರಬೇತಿ ನೀಡಿದರು. ವೇದಿಕೆಯಲ್ಲಿ ಇದ್ದ ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಉಮೇಶ ಕೊಂಡಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಹಾಗೂ ಕೀಟ ವಿಜ್ಞಾನಿ ಡಾ. ರೂಪಾ ಪಾಟೀಲ್, ಟಿ.ಎಸ್.ಎಸ್. ಸಂಸ್ಥೆಯ ಅಧ್ಯಕ್ಷ ಗೋಪಾಲ ಕೃಷ್ಣ ವೈದ್ಯ, ಕೃಷಿ ಇಲಾಖೆಯ ಉಪ ನಿರ್ದೇಶಕ ಟಿ.ಹೆಚ್. ನಟರಾಜ್‌ರವರು ಸಂದರ್ಭೋಚಿತವಾಗಿ ಮಾತನಾಡಿದರು.
ಸ್ಕೊಡ್‌ವೆಸ್ ಸಂಸ್ಥೆಯ ಉಪಾಧ್ಯಕ್ಷ ಕೆ.ವಿ. ಕೂರ್ಸೆ, ಕಾರ್ಯದರ್ಶಿಗಳು ಹಾಗೂ ಮುಖ್ಯ ಹಣಕಾಸು ಆಡಳಿತಾಧಿಕಾರಿಗಳಾದ ಸರಸ್ವತಿ ಎನ್. ರವಿ, ಸದಸ್ಯರಾದ ಪ್ರೊ. ಕೆ.ಎನ್. ಹೊಸಮನಿಯವರ ಉಪಸ್ಥಿತಿಯಲ್ಲಿ ನಡೆದ ಸು-ಕೃಷಿ ಯೋಜನಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಸ್ಕೊಡ್‌ವೆಸ್ ಸಂಸ್ಥೆಯ ಕೃಷಿ ವಿಭಾಗದ ಮುಖ್ಯಸ್ಥ ಪ್ರಶಾಂತ ನಾಯಕ ವಂದಿಸಿದರು. ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಗಂಗಾಧರ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಮಾರಂಭದಲ್ಲಿ ಶಿರಸಿ-ಸಿದ್ದಾಪುರ, ಯಲ್ಲಾಪುರ, ಜೋಯಿಡಾ ಸೇರಿದಂತೆ 500 ಕ್ಕೂ ಹೆಚ್ಚು ಜನ ರೈತರು ಭಾಗವಹಿಸಿದ್ದರು. ಸಮಾರಂಭದಲ್ಲಿ ತೋಟಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ವಿವಿಧ ರೈತ ಉತ್ಪಾದಕ ಸಂಸ್ಥೆಗಳು ಹಾಗೂ ಕಂಪನಿಗಳ ವಸ್ತು ಪ್ರದರ್ಶನ ಆಕರ್ಷಣೀಯವಾಗಿತ್ತು.