ದಾಂಡೇಲಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿ ನಿರ್ಮಿಸಲಾದ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮವನ್ನು ತಾಲೂಕಿನ ಕರಿಯಂಪಾಲಿಯಲ್ಲಿ ಬುಧವಾರ ಹಮ್ಮಿಕೊಳ್ಳಲಾಯಿತು.
ಕರಿಯಂಪಾಲಿ ಗ್ರಾಮದ ಬಡ ಕುಟುಂಬವಾದ ಭಜ್ಜು ಠಕ್ಕು ಜೋರೆ ಅವರ ಕುಟುಂಬಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಂಸ್ಥೆಯ ವಾತ್ಸಲ್ಯ ಕಾರ್ಯಕ್ರಮದಡಿ ಮನೆಯೊಂದನ್ನು ನಿರ್ಮಿಸಿಕೊಟ್ಟಿದೆ. ಈ ವಾತ್ಸಲ್ಯ ಮನೆಯನ್ನು ಹಸ್ತಾಂತರಿಸಿ ಮಾತನಾಡಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರದೀಪ್ ಶೆಟ್ಟಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರ ಸಶಕ್ತೀಕರಣ ಜೊತೆಗೆ ಅಸಹಾಯಕರಿಗೆ ‘ವಾತ್ಸಲ್ಯ’ ಕಾರ್ಯಕ್ರಮದ ಮೂಲಕ ಮನೆ ನಿರ್ಮಾಣ ಮತ್ತು ಇತರ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದರು. ಮಾತೃಶ್ರೀ ಹೇಮಾವತಿ ಅಮ್ಮನವರ ಕಲ್ಪನೆಯಡಿ ಪ್ರಾರಂಭವಾದ ವಾತ್ಸಲ್ಯಮಯಿ ಕಾರ್ಯಕ್ರಮ ಈ ವಾತ್ಸಲ್ಯ ಮನೆ ಹಂಚಿಕೆ. ಹಲವಾರು ನಿರ್ಗತಿಕರ ಬದುಕನ್ನು ಹಸನಾಗಿಸಿರುವ, ಬದುಕು ಕಟ್ಟಿಕೊಟ್ಟ ಕಾರ್ಯಕ್ರಮವಾಗಿ ರೂಪುಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ಯೋಜನಾಧಿಕಾರಿ ಮಲ್ಲಿಕಾ, ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಶ್ರೀಕಾಂತ ನಾಯ್ಕ, ಸ್ಥಳೀಯ ಪ್ರಮುಖರಾದ ಬಾಗು ಮಲಗೊಂಡೆ, ರೇಖಾ ಕಾಂಬಳೆ ಮೊದಲಾದವರು ಉಪಸ್ಥಿತರಿದ್ದು, ವಾತ್ಸಲ್ಯ ಮನೆಗೆ ಶುಭ ಹಾರೈಸಿದರು. ಮನೆ ನಿರ್ಮಿಸಿಕೊಟ್ಟ ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಗೆ ಭಜ್ಜು ಠಕ್ಕು ಜೋರೆ ಹಾಗೂ ಅವರ ಕುಟುಂಬಸ್ಥರು ಕೃತಜ್ಞತೆಗಳನ್ನು ಸಲ್ಲಿಸಿದರು. ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕ್ಷೇತ್ರ ಮೇಲ್ವಿಚಾರಕಾರದ ಜಯಕರ ಅವರು ನಿರೂಪಿಸಿದ ಕಾರ್ಯಕ್ರಮಕ್ಕೆ ಜ್ಞಾನವಿಕಾಸ ಸಮನ್ವಯಾಧಿಕಾರಿ ತುಳಸಾ ವಿಶ್ವಕರ್ಮ ಸ್ವಾಗತಿಸಿ, ವಂದಿಸಿದರು.