ಕಾರವಾರ: ಹಲವು ವರ್ಷಗಳ ಹಿಂದೆ ಮನೆಯಲ್ಲಿ ಉರುವಲಿಗೆ ಕಟ್ಟಿಗೆ ಬಳಕೆ ಹೆಚ್ಚಿತ್ತು. ಕಟ್ಟಿಗೆಯಿಂದ ಮಹಿಳೆಯರ ಆರೋಗ್ಯ ಸಮಸ್ಯೆ ಆಗುತ್ತಿತ್ತು. ಇದನ್ನು ನಿವಾರಣೆಗೆ ನರೇಂದ್ರ ಮೋದಿ ಉಜ್ವಲ ಯೋಜನೆ ಜಾರಿಗೆ ತಂದಿದ್ದು, ಬಡವರೂ ಕೂಡ ನೆಮ್ಮದಿಯಿಂದ ಅಡಿಗೆ ಮಾಡುವಂತಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಇಲ್ಲಿನ ಮಾಲಾದೇವಿ ಕ್ರೀಡಾಂಗಣದಲ್ಲಿ ನಡೆದ ವಿಕಸಿತ ಭಾರತ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ,. ಉಜ್ವಲ ಯೋಜನೆಯಿಂದಾಗಿ ಕಡುಬಡವನ ಮನೆಯಲ್ಲೂ ಗ್ಯಾಸ್ ಇರುವುದನ್ನು ಕಾಣಬಹುದಾಗಿದೆ ಎಂದರು. ರೈತರ ಕಷ್ಟ ಅರಿತು ಕಿಸಾನ್ ಸಮ್ಮಾನ್, ಪ್ರಧಾನ ಮಂತ್ರಿ ಆವಾಸ್, ಪೋಷಣ ಅಭಿಯಾನ, ಪಿಎಂ ಗರೀಬ್ ಕಲ್ಯಾಣ ಅನ್ನ ಯೋಜನೆ, ಆಯುಷ್ಮಾನ್ ಭಾರತ, ಪಿಎಂ ಸ್ವನಿಧಿ, ಫಸಲ ಬಿಮಾ ಒಳಗೊಂಡು ಹಲವು ಯೋಜನೆ ಕೇಂದ್ರ ಸರ್ಕಾರದಿಂದ ಜಾರಿಗೆ ಬಂದಿದ್ದು, ಈ ಯೋಜನೆ ಪ್ರತಿಯೊಬ್ಬರಿಗೂ ತಲುಪಿದೆಯೇ ಇಲ್ಲವೇ ಎಂದು ತಿಳಿಯಲು, ಯೋಜನೆ ವ್ಯಾಪ್ತಿಗೆ ತರಲು ವಿಕಸಿತ ಭಾರತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಜಿಲ್ಲೆಯಲ್ಲಿ ಈಗಾಗಲೇ ಹಲವೆಡೆ ಯಶಸ್ವಿಯಾಗಿ ಕಾರ್ಯಕ್ರಮ ಆಯೋಜಿಸಿ ಜನರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಅದರ ಪ್ರಯೋಜನಗಳ ಬಗ್ಗೆ ತಿಳಿಸಲಾಗಿದೆ ಹಾಗೂ ಯೋಜನೆಗಳ ಸೌಲಭ್ಯ ಪಡೆಯದೆ ಇರುವವರನ್ನು ಗುರುತಿಸಿ ಅವರಿಗೆ ಯೋಜನೆಯ ಸೌಲಭ್ಯ ಪಡೆಯಲು ನೋಂದಣಿ ಮಾಡಿಸಲಾಗಿದೆ ಎಂದರು.
ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಜಿಲ್ಲಾ ಸಂಚಾಲಕ ರಾಜೇಂದ್ರ ನಾಯಕ ಮಾತನಾಡಿ, ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನವು ಜನವರಿ 26ರವರೆಗೆ ನಡೆಯಲಿದೆ. ಗ್ರಾಮಾಂತರ ಮತ್ತು ನಗರ ವ್ಯಾಪ್ತಿಯಯಲ್ಲಿ ಜನರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯಕ, ನಗರ ಮಂಡಳದ ಅಧ್ಯಕ್ಷ ನಾಗೇಶ ಕುರುಡೇಕರ, ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮನೋಜ ಬಾಂದೇಕರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.